Arrest of a man who was walking around with a rod
ಚಿಂತಾಮಣಿ: ತಿಮ್ಮಸಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಾಡ್ ಹಿಡಿದು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನಪುರದ ಎನ್.ಕೃಷ್ಣ (40) ಬಂಧಿತ. ಗ್ರಾಮಾಂತರ ಠಾಣೆ ಎಎಸ್ಐ ಪ್ರಕಾಶ್, ಹೋಂಗಾರ್ಡ್ ಮಂಜುನಾಥ್ ತಿಮ್ಮಸಂದ್ರ, ಚಿನ್ನಸಂದ್ರ, ಕೈವಾರ ಕ್ರಾಸ್, ತಳಗವಾರ ಸೇರಿ ವಿವಿಧ ಗ್ರಾಮಗಳಲ್ಲಿ ಗಸ್ತು ಮುಗಿಸಿ ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ತಿಮ್ಮಸಂದ್ರ ಮಾರ್ಗವಾಗಿ ಠಾಣೆಗೆ ವಾಪಸ್ಸಾಗುತ್ತಿದ್ದಾಗ ತಿಮ್ಮಸಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿಂತಿದ್ದ ಎನ್.ಕೃಷ್ಣ ಪೊಲೀಸರನ್ನು ಕಂಡು ಗಾಬರಿಯಿಂದ ಅವಿತುಕೊಳ್ಳಲು ಮತ್ತು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನದ ಬಳಿ ನಿಂತಿರುವುದಕ್ಕೆ ಮತ್ತು ರಾಡ್ ಇಟ್ಟುಕೊಂಡಿರುವುದಕ್ಕೆ ಕಾರಣ ನೀಡಿಲ್ಲ. ಆದರೆ ತನ್ನ ವಿಳಾಸವನ್ನು ಒಮ್ಮೆ ಮಲ್ಲಿಕಾರ್ಜುನಪುರ ಎಂತಲೂ, ಮತ್ತೊಮ್ಮೆ ಕಂಗಾನಹಳ್ಳಿ ಎಂತಲೂ ಹೇಳಿ ಪೊಲೀಸರನ್ನು ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.