ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಮಾಸಿಕ ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಮಾತನಾಡಿದರು.
ಚನ್ನರಾಯಪಟ್ಟಣ: ತಾಲೂಕಿನ ಬಸ್ತಿಹಳ್ಳಿ, ಮಂಚೇನಹಳ್ಳಿ ಗ್ರಾಮಸ್ಥರು ಪಡಿತರ ಪಡೆಯಲು ಬೇರೆ ಗ್ರಾಮಗಳನ್ನು ಆಶ್ರಯಿಸದಂತೆ ಅಯಾ ಗ್ರಾಮಗಳಲ್ಲೇ ಪಡಿತರ ನೀಡಲು ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಆಹಾರ ಶಿರಸ್ತೇದಾರ್‌ಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ 24ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಶ್ರವಣಬೆಳಗೊಳ ಹೋಬಳಿಯ ಬಸ್ತಿಹಳ್ಳಿ ಮತ್ತು ಮಂಚೇನಹಳ್ಳಿ ಗ್ರಾಮಸ್ಥರು ಶಿವಪುರ ಗ್ರಾಮಕ್ಕೆ ತೆರಳಿ ಪಡಿತರ ಪಡೆಯುವ ವ್ಯವಸ್ಥೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಬೆಕ್ಕ ಸೊಸೈಟಿಯವರು ಬಸ್ತಿಹಳ್ಳಿ, ಮತ್ತು ಮಂಚೇನಹಳ್ಳಿಗೆ ತೆರಳಿ ಪಡಿತರ ನೀಡುವ ವ್ಯವಸ್ಥೆಯಾಗಬೇಕೆಂದು ಆಹಾರ ಇಲಾಖೆ ಶಿರಸ್ತೇದಾರ್‌ಗೆ ಸೂಚನೆ ನೀಡಲಾಗಿದೆ. ಆದೇ ರೀತಿ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಪಟ್ಟಿ, ದೂರವಾಣಿ ಸಂಖ್ಯೆ ಮತ್ತು ದರಪಟ್ಟಿ ಹಾಕಬೇಕು, ಪಡಿತರ ವ್ಯವಸ್ಥೆಯಲ್ಲಿ ತೊಂದರೆಯಾದಲ್ಲಿ ಗ್ಯಾರಂಟಿ ಸಮಿತಿಯನ್ನು ನೇರವಾಗಿ ಸಂರ್ಪಕಿಸುವಂತೆ ಆಗಬೇಕೆಂದರು.
ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಅತ್ಯುತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಿಂದ ಅತಿದೊಡ್ಡ ಲಾಭ ತಾಲೂಕಿನ ಮಹಿಳೆಯರಿಗೆ ಸಿಗುತ್ತಿದೆ. 81,111 ಫಲಾನುಭವಿಗಳಿದ್ದು, 821 ಮಹಿಳೆಯರು ಜಿಎಸ್ಟಿ ಪಾವತಿದಾರರೆಂದು ಯೋಜನೆಯಿಂದ ಕೈಬಿಡಲಾಗಿದೆ. ಈ ಪೈಕಿ 153 ಮಂದಿ ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಪುನಃ ಅರ್ಜಿ ನೀಡಿದ್ದು, ಅವುಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಅರ್ಜಿ ಕಳಿಸುವಂತೆ ಸಿಡಿಪಿಒ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ 15.98 ಕೋಟಿ ರೂ. ಶಕ್ತಿ ಯೋಜನೆಗೆ 3.30 ಕೋಟಿ ರೂ. ಗೃಹಜ್ಯೋತಿಗಾಗಿ 2.53 ಕೋಟಿ ರೂ. ಅನ್ನಭಾಗ್ಯ ಯೋಜನೆಗಾಗಿ 4.4ಕೋಟಿ ರೂ. ಮತ್ತು ಯುವನಿಧಿ ಯೋಜನೆಗಾಗಿ 21 ಲಕ್ಷ ರೂ. ಸೇರಿ ತಾಲೂಕಿನ ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ಸರ್ಕಾರ 26.33 ಕೋಟಿ ರೂ. ಹಣವನ್ನು ಅನುದಾನದ ರೂಪದಲ್ಲಿ ನೀಡುತ್ತಿದೆ ಎಂದರು. ಜೂ.30 ರಿಂದ ಮತಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಎಲ್ಲ ಗ್ಯಾರಂಟಿ ಸಮಿತಿ ಸದಸ್ಯರು ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ನಿರ್ದೇಶಕ ಗಿರೀಶ್, ಗ್ಯಾರಂಟಿ ವ್ಯಾಪ್ತಿಯ ಅಧಿಕಾರಿಗಳು, ಮತ್ತು ಸಮಿತಿ ಸದಸ್ಯರು ಹಾಜರಿದ್ದರು.
ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪಟ್ಟಣದ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನೆರಳಿನ ಶೆಲ್ಟರ್ ಅಳವಡಿಸುವ ಕಾಮಗಾರಿಯ ಶಂಕುಸ್ಥಾಪನೆಗೆ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸ್ಪಷ್ಟೀಕರಣ ಕೇಳಿ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ನಿಗಮದ ಎಂಡಿ ಅವರ ಗಮನಕ್ಕೂ ತರಲಾಗುವುದು ಎಂದರು.