ಬೆಂಗಳೂರು: ನರ್ಮದಾ ನದಿದಂಡೆ ಅಭಿವೃದ್ಧಿ ಯೋಜನೆ ಮಾದರಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅರ್ಕಾವತಿ ನದಿದಡ ಅಭಿವೃದ್ಧಿ ಭರದಿಂದ ಸಾಗಿದೆ. 156 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆ ಯೋಜನೆ ಭಾಗವಾಗಿ ನದಿ ದಡದ ಎರಡು ಭಾಗದಲ್ಲಿ ತಡೆಗೋಡೆ (ಸೈಡ್ ವಾಲ್) ಕಾಮಗಾರಿ ನಡೆಯುತ್ತಿದೆ.
ಇತ್ತೀಚೆಗೆ ಸರ್ಕಾರ ಯೋಜನೆಯ ಭಾಗವಾಗಿ ನದಿಯ ಎರಡು ಬದಿಗಳಲ್ಲೂ ಹೈಟೆಕ್ ಪಾರ್ಕ್ ನಿರ್ಮಾಣಕ್ಕಾಗಿ 40 ಮೀಟರ್ ಭೂಸ್ವಾಧೀನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ರೇಷ್ಮೆ ನಗರಿ ಮಧ್ಯಭಾಗದಲ್ಲಿ ಹರಿಯುವ ಅರ್ಕಾವತಿ ನದಿ ದಡವನ್ನು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೆಶದಿಂದ ಹೈಟೆಕ್ ಪಾರ್ಕ್, ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ನಿರ್ಮಿಸಲು ಯೋಜಿಸಲಾಗಿದೆ. ಕಾವೇರಿ ನೀರಾವರಿ ನಿಗಮ ಲಿಮಿಟೆಡ್‌ನಿಂದ ಕಾಮಗಾರಿಗೆ , ಚಾಲನೆ ನೀಡಿದ್ದು, ತಡೆಗೋಡೆ (ಸೈಡ್ ವಾಲ್)ನಿರ್ಮಾಣ ನಡೆಯುತ್ತಿದೆ.
ನಗರದ ಮಧ್ಯಭಾಗದಲ್ಲಿ ಅರ್ಕಾವತಿ ನದಿ 4-5ಕಿ.ಮೀ ಉದ್ದದಲ್ಲಿ ಹರಿಯುತ್ತದೆ. ಇದರ ಎಡ ಮತ್ತು ಬಲ ದಂಡೆಗಳಲ್ಲಿ ತಲಾ 1.95 ಕಿ.ಮೀ ಉದ್ದಕ್ಕೆ, ಒಟ್ಟು 3.9 ಕಿ.ಮೀ ಉದ್ದದಲ್ಲಿ ನದಿ ಮಟ್ಟದಿಂದ 5.5 ಮೀಟರ್ ಎತ್ತರದವರೆಗೆ ತಡೆಗೋಡೆ ಬರಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಮುಖ್ಯ ಸಂಪರ್ಕ ಸೇತುವೆಯಿಂದ 1.95 ಕಿ.ಮೀ ಉದ್ದಕ್ಕೆ ನದಿಯ ಎರಡು ಬದಿಯಲ್ಲಿ ತಡೆಗೋಡೆ ಹಾಗೂ ಸೌಂದರ್ಯಕರಣ ಕಾಮಗಾರಿ ಕೈಗೊಳ್ಳಲು 28 ಎಕರೆ 18 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇಲ್ಲಿ ಹೈಟೆಕ್ ಪಾರ್ಕ್, ವಾಕಿಂಗ್ ಪಾಥ್, ಪ್ರತ್ಯೇಕ ಒಳಚರಂಡಿ ವ್ಯವಸ್ಥೆ, ಗ್ರೀಕ್ ಮಾದರಿ ಬಯಲು ರಂಗಮಂದಿರ, ಯೋಗ, ಜಿಮ್ ಕೇಂದ್ರಗಳು, ಕಾರಂಜಿ, ಬೋಟಿಂಗ್, ಮಕ್ಕಳ ಆಟಿಕೆಗಳ ಮೂಲಕ ನವಸ್ಪರ್ಶ ನೀಡುವ ಮೂಲಕ ಕಾವೇರಿಯ ಉಪನದಿಯನ್ನು ಆಕರ್ಷಕ ಪ್ರವಾಸಿ ಕೇಂದ್ರವಾಗಿಸುವ ಗುರಿಯನ್ನು ಸರ್ಕಾರ ನಿರ್ಧಾರ ಮಾಡಿದೆ.