ಬಾಗಲಕೋಟೆ: ಆರ್.ಎಸ್.ಎಸ್. ನೋಂದಣಿ ಹಾಗೂ ಲೆಕ್ಕವನ್ನು ಮಹಾತ್ಮಾ ಗಾಂಧಿಜಿ, ನೆಹರು, ಅಂಬೇಡ್ಕರ್ ಅಂತವರೆ ಕೇಳಿಲ್ಲ. ಸಂಘದ ಶಾಖೆಗೆ ಹೋಗಿ ಬಂದಿದ್ದಾರೆ. ಇನ್ನೂ ನೀವು ಕೇಳ್ತಿರಾ? ಸಂಘ ನಿಮ್ಮ ಕಡೆಯಿಂದ ಪಟ್ಟಿ(ದೇಣಿಗೆ) ಪಡೆದುಕೊಂಡಿದೆಯಾ? ಮತ್ತೆ ನಿಮಗೇಕೆ ಕೊಡಬೇಕು ಲೆಕ್ಕ?
ಆರೆಸ್ಸೆಸ್‌ನ ಪಾರದರ್ಶಕತೆ, ಸಾಂವಿಧಾನಿಕ ಬದ್ಧತೆ ಪ್ರಶ್ನಿಸಿ ಮೋಹನ್ ಭಾಗವತ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾಂಡಗೆ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಬಗ್ಗೆ ಖಾರವಾಗಿ ಮಾತನಾಡಿದರು.
ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆಂದು ಸಚಿವ ಪ್ರಿಯಾಂಕ್ ತಿಳಿದುಕೊಂಡಿದ್ದಾರೆ. ಸೂರ್ಯನಿಗೆ ಉಗುಳಿದರೆ ಮೈಮೇಲೆ ಬೀಳುತ್ತದೆ. ಪ್ರಧಾನಿಯಾಗಿದ್ದ ಜವಹಾರಲಾಲ್ ನೆಹರೂ ಅವರೇ ಆರ್‌ಎಸ್‌ಎಸ್‌ಗೆ ಪಥ ಸಂಚಲನದಲ್ಲಿ ಅವಕಾಶ ನೀಡಿದ್ದರು. ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ತಿವಿದರು.
ಕಿಡಿಗೇಡಿಗಳು ಹಚ್ಚಿದ ಬೆಂಕಿಯಲ್ಲಿ ತಾಯಿ ಹಾಗೂ ಕಾಕಾನನ್ನು ಕಳೆದುಕೊಂಡಿದ್ದೆ. ಆಗ ಆರ್‌ಎಸ್‌ಎಸ್‌ನಿಂದಾಗಿ ಶಿಕ್ಷಣ ಮಾಡಲು ಸಾಧ್ಯವಾಯಿತು ಎಂದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಸಂದರ್ಶನವೊAದರಲ್ಲಿ ಹೇಳಿದ್ದಾರೆ. ತಂದೆಯ ಮಾತನ್ನಾದರೂ ಕೇಳಪ್ಪ ನೀನು. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಗಲಭೆ ಮಾಡಿದವರ ಮೇಲಿನ ಪ್ರಕರಣ ವಾಪಸ್ ಪಡೆದಾಗ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದರು.
ಮೋಹನ್ ಭಾಗವತ್‌ಗೆ ಪ್ರಶ್ನೆ ಕೇಳುವಷ್ಟು ದೊಡ್ಡವರಲ್ಲ ನೀವು. ನಿಮಗೆ ಉತ್ತರಿಸಲು ನನ್ನಂತವರು ಸಾಕು. ನಮಗೆ ಬುದ್ದಿ ಹೇಳಲು ಬರುತ್ತೀರಾ? ನೀವು ಖರ್ಗೆ ಪುತ್ರ ಎಂದು ಜನರು ನಿನ್ನ ಗುರುತು ಹಿಡಿಯುತ್ತಾರೆ. ನಿಮ್ಮಂತವರು ಸೇರಿ ನೂರು ವರ್ಷಗಳ ಇತಿಹಾಸ ಇರುವ, ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟAತ ಕಾಂಗ್ರೆಸ್ ಪಕ್ಷದ ಮರ್ಯಾದೆ ಹಾಳು ಮಾಡುತ್ತಿದ್ದೀರಿ ಎಂದು ಕಿವಿಹಿಂಡಿದರು.
ಈ ಕುರಿತು ಸಚಿವ ಖರ್ಗೆ ಅವರಿಗೆ ಪತ್ರವನ್ನೂ ಬರೆದಿರುವ ನಾರಾಯಣಸಾ ಭಾಂಡಗೆ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ರಾಜಕೀಯ ಪೂರ್ವಾಗ್ರಹದ ಮೇಲೆ ಅಲ್ಲ. ಜಾತಿ, ಧರ್ಮ, ಭಾಷೆ ಭೇದವಿಲ್ಲದೇ ಮಾನವೀಯ ಸೇವೆ ಮಾಡುತ್ತಿರುವುದಕ್ಕೆ ದೇಶವೇ ಸಾಕ್ಷಿಯಾಗಿದೆ ಎಂದಿದ್ದಾರೆ.
ಸಂಘವು ತನ್ನ ಚಟುವಟಿಕೆಗಳನ್ನು ಸಂವಿಧಾನಬದ್ಧ ಹಕ್ಕುಗಳ ಅಡಿಯಲ್ಲಿ ಮುಂದುವರಿಸಿಕೊAಡು ಬಂದಿದೆ. ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುವುದು ಸೂಕ್ತವಲ್ಲ. ನಿಮ್ಮ ಪತ್ರದಿಂದ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಏಕೆ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸುತ್ತದೆ ಎಂಬ ಅನುಮಾನ ಮೂಡಿದೆ ಎಂದು ತಿಳಿಸಿದ್ದಾರೆ.
ದೇಶದ ಸಂವಿಧಾನವು ಯಾವುದೇ ಸಂಘಟನೆ ಕಾನೂನು ಉಲ್ಲಂಘಿಸಿದರೆ ತನಿಖೆ ನಡೆಸಲು ಮತ್ತು ಕ್ರಮ ಕೈಗೊಳ್ಳಲು ಸಮರ್ಪಕ ವ್ಯವಸ್ಥೆಯಿದೆ. ಆದರೆ, ರಾಜಕೀಯ ಪ್ರತೀಕಾರದ ಭಾವನೆಯಿಂದ ನಿರ್ದಿಷ್ಟ ಸಂಘಟನೆಯನ್ನು ಮಾತ್ರ ಗುರಿಯಾಗಿಸುವುದು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗುವುದಿಲ್ಲ ಎಂದು ಖರ್ಗೆಗೆ ತಿಳಿಸಿದ್ದಾರೆ.