ಬೆಂಗಳೂರು: ಕಾಡಾನೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಇಂದು (ನ.23) ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನಾ ಕಾಟ ಹೆಚ್ಚಾದ ಹಿನ್ನಲೆ ಅವುಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರ ಮಾಡಲಾಗಿತ್ತು. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಶಾಸಕಿ ನಯನಾ, ಕೂಡಲೇ ಈ ಸ್ಥಳಾಂತರ ಕ್ರಮವನ್ನು ನಿಲ್ಲಿಸಬೇಕು.
ಹಾಗೆಯೇ ಕರೆದುಕೊಂಡು ಬಂದಿರುವ ಆನೆಗಳನ್ನು ಹೊಡೆದುಕೊಂಡು ಹೋಗಬೇಕು. ಇಲ್ಲದಿದ್ದರೆ ರಾಜೀನಾಮೆ ಸಲ್ಲಿಸುವುದಾಗಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. ಈಗ ತಮ್ಮ ಮಾತಿನಂತೆ ನಯನಾ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು ರಾಜೀನಾಮೆ ಪತ್ರ ಸಲ್ಲಿಸಿ ಮಾಧ್ಯಮದವರ ಜತೆ ಮಾತಾಡಿದ ಶಾಸಕಿ, ಸ್ಪೀಕರ್ ಅವರು ಕಚೇರಿಯಲ್ಲಿ ಉಪಸ್ಥಿತರಿರಲಿಲ್ಲ. ಹೀಗಾಗಿ ಅವರ ಆಪ್ತ ಕಾರ್ಯದರ್ಶಿ ಅವರಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ಅವರು, ನನ್ನ ರಾಜೀನಾಮೆಯನ್ನು ಸ್ಪೀಕಾರ ಮಾಡಿಲ್ಲ. ಹೀಗಾಗಿ ನಾಳೆ ಸ್ಪೀಕರ್ ಬಳಿ ರಾಜೀನಾಮೆ ಸಲ್ಲಿಸುವುದಾಗಿ ನಯನಾ ಮೋಟಮ್ಮ ತಿಳಿಸಿದ್ದಾರೆ.
ಆನೆಗಳನ್ನು ನಮ್ಮ ಕ್ಷೇತ್ರಕ್ಕೆ ಬಿಡಲು ನಾವು ಒಪ್ಪುವುದಿಲ್ಲ. ಅರಣ್ಯಾಧಿಕಾರಿಗಳು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಜನಕ್ಕೆ ಏನಾದ್ರೂ ನಷ್ಟ ಯಾರು ಭರಿಸುತ್ತಾರೆ? ನನ್ನನ್ನು ಕೂಡ ಈ ಬಗ್ಗೆ ಕೇಳಿಲ್ಲ, ನಾವು ಜನರಿಗೆ ಉತ್ತರಕೊಡಬೇಕಿದೆ. ವಿರೋಧದ ಬೆನ್ನಲ್ಲೇ ಗೌಪ್ಯವಾಗಿ ಕಾರ್ಯಾಚರಣೆ ಮಾಡಲು ಶುರುಮಾಡಿದ್ದಾರೆ. ಡ್ರೈವ್ ಮಾಡ್ತಿರೋದನ್ನು ನಿಲ್ಲಿಸಿ, ಇದಕ್ಕೆ ತಾತ್ಕಾಲಿಕ ವಿರಾಮ ಕೊಡಬೇಕೆಂದು ಶಾಸಕಿ ಹೇಳಿದ್ದಾರೆ.
ಅಧಿಕಾರಿಗಳು ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ, ತಮ್ಮಿಷ್ಟದಂತೆ ಕೆಲಸ ಮಾಡುತ್ತಿದ್ದಾರೆ. ಸರಕಾರ ನಮ್ಮ ಮಾತು ಕೇಳಲಿಲ್ಲ ಅಂದ್ರೆ ನಾವ್ಯಾಕೆ ಇರಬೇಕು? ಹಾಸನದ ಜನರ ಜೀವಕ್ಕೆ ಮಾತ್ರ ಬೆಲೆನಾ.? ಮೂಡಿಗೆರೆ ಜನರ ಜೀವಕ್ಕೆ ಬೆಲೆ ಇಲ್ವಾ..? ಎಂದು ನಯನಾ ಮೋಟಮ್ಮ ಖಾರವಾಗಿ ಪ್ರಶ್ನಿಸಿದ್ದಾರೆ.
ನಾನು ಕೂಡ ಮಲೆನಾಡು ಭಾಗದ ಶಾಸಕ, ನಮ್ಮಲ್ಲೂ ಕೂಡ ಮಾನವ ಪ್ರಾಣಿ ಸಂಘರ್ಷ ಇದೆ. ನನ್ನ ಕ್ಷೇತ್ರದಲ್ಲಿಂದು ಹುಲಿ ದಾಳಿ ಆಗಿದೆ. ಇದು ದಿನನಿತ್ಯ ಎದುರಿಸುವ ಸಮಸ್ಯೆಯಾಗಿದೆ. ನಯನಾ ಮೋಟಮ್ಮ ಅವರ ಆಕ್ರೋಶ ಸರಿಯಿದೆ, ಆದರೆ ಇದಕ್ಕೆ ರಾಜೀನಾಮೆ ಪರಿಹಾರವಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಬಗೆಹರಿಸಲು ವ್ಯವಸ್ಥೆಯೊಂದಿಗೆ ಹೋರಾಟ ನಡೆಸಬೇಕು. ದೂರವಾಣಿ ಮೂಲಕ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ, ಅರಣ್ಯ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸಿಎಂ ಕೂಡ ಅರಣ್ಯ ಸಚಿವರೊಂದೊಗೆ ಚರ್ಚಿಸುವಿದಾಗಿ ಹೇಳಿದ್ದು, ನಯನಾಗೆ ರಾಜೀನಾಮೆ ಕೊಡುವುದು ಬೇಡ ಎಂದಿದ್ದೇನೆಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ರಾಜೀನಾಮೆ ಬಗ್ಗೆ, ಮಾತನಾಡಿರುವ ಬಿಜೆಪಿ ಶಾಸಕ ಸಿ.ಟಿ. ರವಿ, ಜನಾಕ್ರೋಶ ತಪ್ಪಿಸಿಕೊಳ್ಳಲು ಶಾಸಕಿ ರಾಜೀನಾಮೆ ನಾಟಕವಾಡುತ್ತಿದ್ದಾರೆ. ನಯನಾ ಮೋಟಮ್ಮ ತಾವು ರಾಜೀನಾಮೆ ಕೊಡುವ ಬದಲು ಸಚಿವ ಶಿವಲಿಂಗೇಗೌಡರ ರಾಜೀನಾಮೆ ಕೇಳಬೇಕಿತ್ತು. ನಿಮ್ಮ ಪಕ್ಷದ ಸಚಿವರೇ ಆನೆಗಳನ್ನು ಅಟ್ಟುತ್ತೇನೆಂದು ಹೇಳಿದ್ದರೆಂದು ಶಾಸಕಿಯ ರಾಜೀನಾಮೆಗೆ ವ್ಯಂಗ್ಯವಾಡಿದ್ದಾರೆ.