ಪುರಾತತ್ವ ಇಲಾಖೆಯಡಿ ಏವೂರ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ೨.೫೦ ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಮಂಗಳವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು. ಶಹಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಹಂತ ಚಂದಾಪುರ, ಗೌಡಪ್ಪಗೌಡ ಆಲ್ದಾಳ ಇತರರಿದ್ದರು.
- ಕಲ್ಯಾಣಿ ಚಾಲುಕ್ಯರ ಶಿಲ್ಪಕಲಾ ವೈಭವದ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ
- ಐತಿಹಾಸಿಕ ಮಹತ್ವವುಳ್ಳ ಈ ವಾಸ್ತುಶಿಲ್ಪ ತಾಣ
ಕೆಂಭಾವಿ: ಏವೂರ ಗ್ರಾಮದ ಐತಿಹಾಸಿಕ ಸೋಮೇಶ್ವರ ದೇವಾಲಯದಲ್ಲಿ ಪುರಾತತ್ವ ಇಲಾಖೆಯಡಿ ೨.೫೦ ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಮಂಗಳವಾರ ಶಾಸಕ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ಏವೂರ ಸೋಮೇಶ್ವರ ದೇವಸ್ಥಾನ ಐತಿಹಾಸಿಕ, ಧಾರ್ಮಿಕ ಹಾಗೂ ವಾಸ್ತುಶಿಲ್ಪದ ಮಹತ್ವ ಹೊಂದಿರುವ ಪಾರಂಪರಿಕ ತಾಣವಾಗಿದ್ದು, ೧೧ ಮತ್ತು ೧೨ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಪ್ರದೇಶ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು ಎಂದು ಹೇಳಿದರು.
ದೇವಸ್ಥಾನದ ವಿಶಿಷ್ಟ ವಾಸ್ತುಶಿಲ್ಪ, ಕಲ್ಲಿನ ಕೆತ್ತನೆ, ಕಂಬ, ಶಾಸನಗಳು ಹಾಗೂ ಸುಂದರ ಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಿಂದ ಈ ಪಾರಂಪರಿಕ ದೇವಸ್ಥಾನಕ್ಕೆ ಹೊಸ ರೂಪ ಸಿಗಲಿದೆ ಎಂದರು. ದೇವಸ್ಥಾನದ ಅಭಿವೃದ್ಧಿಯೊಂದಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಶಹಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಹಂತ ಚಂದಾಪುರ, ಗೌಡಪ್ಪಗೌಡ ಆಲ್ದಾಳ ಇತರರಿದ್ದರು.