ಹುಮನಾಬಾದ್ನಲ್ಲಿ ಗುರುವಾರ ನಡೆದ ಡಿ.ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ತಾಪಂ ಇಒ ದೀಪಿಕಾ ನಾಯ್ಕರ್, ಗ್ರೇಡ್-2 ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ವಿಠಲ್ ಸೇಡಂಕರ್, ಡಾ.ಜಯಕುಮಾರ ಸಿಂಧೆ ಇದ್ದರು.
ಹುಮನಾಬಾದ್: ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ, ದೀನ-ದಲಿತರು ಹಾಗೂ ಶೋಷಿತರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಮಹತ್ವದ ಕಾರ್ಯಕ್ರಮ ಜಾರಿಗೊಳಿಸಿದ ದೂರದೃಷ್ಟಿ ನಾಯಕ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಡಿ ಏರ್ಪಡಿಸಿದ್ದ ದಿವಂಗತ ಡಿ.ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಸು ಸಾಮಾಜಿಕ ನ್ಯಾಯ ಘೋಷಣೆಯಾಗಿ ಉಳಿಸದೆ ಆಡಳಿತದ ಮೂಲಕ ಅನುಷ್ಠಾನಗೊಳಿಸಿದರು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಸಾಮಾಜಿಕ ನ್ಯಾಯದ ಆಶಯ ಸಾಕಾರಗೊಳಿಸಬೇಕು ಎಂದರು.
ಡಾ.ಜಯಕುಮಾರ ಸಿಂಧೆ ಉಪನ್ಯಾಸ ನೀಡಿ, ಅರಸು ಆಡಳಿತಾವಧಿಯಲ್ಲಿ ಜಾರಿಯಾದ ಭೂ ಸುಧಾರಣೆ, ಜನಪರ ಯೋಜನೆಗಳು ಸಮಾಜದಲ್ಲಿ ಸಮಾನತೆ ಮೂಡಿಸಲು ಸಹಕಾರಿಯಾಗಿವೆ ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ ಸೇಡಂಕರ್ ಪ್ರಾಸ್ತಾವಿಕ ಮಾತನಾಡಿದರು. ಕಚೇರಿ ವ್ಯವಸ್ಥಾಪಕ ಪಿ.ಎಂ. ಟಕ್ಕಳಕಿ, ನಿಲಯ ಪಾಲಕರಾದ ಸುರೇಶ ಮಳಖೇಡ, ಬಸವರಾಜ, ಮಲ್ಲಿಕಾರ್ಜುನ, ಇಮಾನ್ವೆಲ್, ಅಶ್ವಿನಿ, ಮಂಗಲಾ, ರೇಷ್ಮಾ, ಸಂವಿಧಾನ, ಕ್ರಿಸ್ತಕುಮಾರಿ, ಶಕುಂತಲಾ, ಮಹೇಂದ್ರ, ಕವಿತಾ, ಮಹೇಶ, ಸುಷ್ಮಾ, ಮಲ್ಲಪ್ಪ ಇತರರಿದ್ದರು.
ಗ್ರೇಡ್-2 ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರು ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹತ್ತನೇ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.