ರಾಜ್ಯಪಾಲರಿಗೆ ದೂರು ಸಲ್ಲಿಕೆ 
ರಾಜ್ಯ

ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಎಂಡಿ ಹುದ್ದೆಗೆ ನಿಯಮ ಉಲ್ಲಂಘಿಸಿ ಎ.ಆರ್.ರವಿ ನೇಮಕ: ದಾಖಲೆ ಸಮೇತ ರಾಜ್ಯಪಾಲರಿಗೆ ದೂರು-Complaint to Governor along with documents

ಬೆಂಗಳೂರು: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ಎಂಡಿ ಹುದ್ದೆಗೆ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ಹಾಗೂ ಮಾನವ ಸಂಪನ್ಮೂಲ (ಎಚ್‌ಆರ್) ನಿಯಮ ಉಲ್ಲಂಘಿಸಿ ಗ್ರೂಪ್​ ಎ ವೃಂದದ (ಗೆಜೆಟೆಡ್​) ಅಧಿಕಾರಿ

ಆರ್.ರವಿ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.

ಹಣಕಾಸು ಇಲಾಖೆ 2022ರ ನ.25ರಂದು ಅನುಮೋದಿಸಿದ ಮಾನವ ಸಂಪನ್ಮೂಲ ಮಾದರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2023ರ ಜ.11ರಂದು ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಕೆಎಸ್‌ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ನಿಯೋಜನೆ ಆಧಾರದಲ್ಲಿ ಐಎಎಸ್ ಅಧಿಕಾರಿಗೆ ಮೀಸಲಾಗಿರಬೇಕು. ಆದರೆ, ಈ ನಿಯಮ ಮೀರಿ ರವಿ ಅವರನ್ನು ಎಂಡಿ ಹುದ್ದೆಗೆ ನೇಮಿಸಲಾಗಿದೆ. ಹಾಗಾಗಿ, ಈ ನೇಮಕಾತಿಯನ್ನು ತಕ್ಷಣ ರದ್ದುಗೊಳಿಸಿ ಐಎಎಸ್ ಅಧಿಕಾರಿಯನ್ನು ನೇಮಿಸಬೇಕೆಂದು ರಾಜ್ಯಪಾಲರಿಗೆ, ದಾಖಲೆ ಸಮೇತ ಇ-ಮೇಲ್ ಮೂಲಕ ಕೊಟ್ಟಿರುವ ದೂರಿನಲ್ಲಿ ದೂರುದಾರ ಬಿ.ವಿ.ಗೌತಮ್ ಎಂಬುವರು ಉಲ್ಲೇಖಿಸಿದ್ದಾರೆ.
ಔಷಧಗಳು, ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಪ್ರಮುಖ ಜವಾಬ್ದಾರಿಯನ್ನು ನಿಗಮ ಹೊಂದಿದೆ.2022ರ ನ.25ರಂದು ಹಣಕಾಸು ಇಲಾಖೆಯು,ನಿಗಮಕ್ಕೆ ಒಟ್ಟು 331 ಹುದ್ದೆಗಳನ್ನು ಮಂಜೂರು ಮಾಡಿ ಮಾನವ ಸಂಪನ್ಮೂಲ ಮಾದರಿಯನ್ನು ಅನುಮೋದಿಸಿತ್ತು. ಇದರಲ್ಲಿ ಎಂಡಿ ಹುದ್ದೆಯನ್ನು ನಿಯೋಜನೆ ಆಧಾರದಲ್ಲಿ ಐಎಎಸ್ ಅಧಿಕಾರಿಯನ್ನೇ ಭರ್ತಿ ಮಾಡಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದಿದ್ದಾರೆ.
ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ನಿರ್ದೇಶನಾಲಯದ ಜಂಟಿ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೂಪ್ ‘ಎ’ ಅಧಿಕಾರಿಯಾದ ಎ.ಆರ್.ರವಿ ಅವರನ್ನು ನಿಗಮದ ಎಂಡಿ ಹುದ್ದೆಗೆ ನೇಮಿಸಲಾಗಿದೆ. ಜಂಟಿ ನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ಶ್ರೇಣಿಯು ನಿರ್ದೇಶಕರಿಗಿಂತ ಸ್ವಲ್ಪ ಕೆಳಗೆ ಮತ್ತು ಉಪ ನಿರ್ದೇಶಕರಿಗಿಂತ ಮೇಲಿರುತ್ತದೆ. ಈ ಶ್ರೇಣಿಯ ಹಂತದ ಅಧಿಕಾರಿಗಳು ರಾಜ್ಯ ನಿರ್ದೇಶನಾಲಯಗಳಲ್ಲಿ ಇಲಾಖಾ ವಿಭಾಗಗಳು, ಪ್ರಾದೇಶಿಕ ನೀತಿಗಳು ಮತ್ತು ಪ್ರಮುಖ ಆಡಳಿತ ಚೌಕಟ್ಟುಗಳಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ, ಐಎಎಸ್ ಶ್ರೇಣಿಯ ಹುದ್ದೆಗೆ ಏಕಾಏಕಿ ರವಿ ಅವರನ್ನು ನಿಯಮಬಾಹಿರವಾಗಿ ತಂದು ಕೂರಿಸಲಾಗಿದೆ ಎಂದು ದೂರುದಾರರು ವಿವರಿಸಿದ್ದಾರೆ.