ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಉಪ ಸಮರದ ಸಮಯ. ಶಾಸಕರುಗಳಾಗಿದ್ದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಈಗ ಮತದಾನದ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ಮಹತ್ವದ ಉಪಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಘೊಷಣೆಯ ಬೆನ್ನಲ್ಲೇ ಉಭಯ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದ್ದು, ಗೆಲುವಿಗಾಗಿ ಕಸರತ್ತು ಶುರುವಾಗಿದೆ.
ತಂತ್ರ ಪ್ರತಿತಂತ್ರದ ಅಖಾಡ: ಈಗಾಗಲೇ ಎರಡು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಪರೀಕ್ಷೆಗೆ ಸಜ್ಜಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ದಿನಗಳ ಹಿಂದಷ್ಟೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸಭೆ ನಡೆಸಿವೆ. ಹೈಕಮಾಂಡ್ ಒಪ್ಪಿಗೆಗಾಗಿ ಹೆಸರುಗಳನ್ನು ದೆಹಲಿಗೆ ರವಾನಿಸಿವೆ. ಎರಡೂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಹಿರಿಯ ಸಚಿವರು, ಶಾಸಕರು ಮತ್ತು ಪ್ರಮುಖ ಮುಖಂಡರಿಗೆ ಕ್ಷೇತ್ರವಾರು ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಗ್ರಾಮ ಮಟ್ಟದಿಂದಲೇ ಮತದಾರರನ್ನು ಸೆಳೆಯಲು ಕಾರ್ಯಕರ್ತರ ಪಡೆ ಸನ್ನದ್ಧವಾಗಿದ್ದು, ಅಭ್ಯರ್ಥಿಗಳ ಅಧಿಕೃತ ಘೊಷಣೆಯೊಂದೇ ಬಾಕಿ ಉಳಿದಿದೆ.
ಸರ್ಕಾರಕ್ಕೆ ಪರೀಕ್ಷೆ, ಪ್ರತಿಪಕ್ಷಕ್ಕೆ ಸವಾಲು: ಈ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ಗೆ ತನ್ನ ಶಕ್ತಿ ಪ್ರದರ್ಶನದ ವೇದಿಕೆಯಾದರೆ, ಪ್ರತಿಪಕ್ಷ ಬಿಜೆಪಿಗೆ ನೆಲೆ ಕಂಡುಕೊಳ್ಳುವ ಸವಾಲಾಗಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಹಠ ಕಾಂಗ್ರೆಸ್ ನಾಯಕರದ್ದಾದರೆ, ಆಡಳಿತ ವಿರೋಧಿ ಅಲೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಬಾರಿ ಕಮಲ ಅರಳಿಸಬೇಕೆಂಬ ನಂಬಿಕೆ ಬಿಜೆಪಿಯದ್ದಾಗಿದೆ. ನೇರ ಹಣಾಹಣಿ ಇರುವ ಈ ಕಣದಲ್ಲಿ ಮತದಾರ ಯಾರಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ಗೆ ಈ ಗೆಲುವು ಅನಿವಾರ್ಯವೇಕೆ?
- 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ವಶವಾಗಿದ್ದವು. ಈಗ ಇವುಗಳನ್ನು ಮರಳಿ ಗೆಲ್ಲದಿದ್ದರೆ ಅಪಖ್ಯಾತಿ ಹೆಗಲೇರಲಿದೆ.
- ಪಕ್ಷದ ಹಿರಿಯ ನಾಯಕರ ನಿಧನದಿಂದ ತೆರವಾದ ಸ್ಥಾನಗಳನ್ನು ಗೆಲ್ಲುವುದು ಅವರ ನಾಯಕತ್ವಕ್ಕೆ ಸಲ್ಲಿಸುವ ಗೌರವ ಮತ್ತು ಕುಟುಂಬದ ವರ್ಚಸ್ಸನ್ನು ಉಳಿಸುವ ಅನಿವಾರ್ಯತೆಯಾಗಿದೆ.
- ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಏನಂದುಕೊಂಡಿದ್ದಾರೆ ಎಂಬುದು ಈ ಫಲಿತಾಂಶ ಸ್ಯಾಂಪಲ್ ರೂಪದಲ್ಲಿ ಸಾಬೀತಾಗಲಿದೆ.
- ಸೋಲು ಸಂಭವಿಸಿದರೆ ಅದು ಸರ್ಕಾರದ ಆಡಳಿತಕ್ಕೆ ಹಿನ್ನಡೆಯಾಗಿ ಬಿಂಬಿತವಾಗುವ ಭೀತಿ ಇದೆ. ಜವಾಬ್ದಾರಿ ಹೊತ್ತವರ ಪ್ರಯತ್ನ ಒರೆಗೆ ಹಚ್ಚಿದಂತಾಗುತ್ತದೆ.
ಬಾಗಲಕೋಟೆ
ಕಾಂಗ್ರೆಸ್: ಮಲ್ಲಿಕಾರ್ಜುನ ಮೇಟಿ (ಮೇಟಿ ಕುಟುಂಬ)
ಬಿಜೆಪಿ: ವೀರಣ್ಣ ಚರಂತಿ ಮಠ/ ಪಿ.ಎಚ್.ಪೂಜಾರ್
ಬಿಜೆಪಿಗೇಕೆ ಬೇಕು ಗೆಲುವು?
1. 2008ರಿಂದ ಈ ಕ್ಷೇತ್ರವನ್ನು ಬಿಜೆಪಿ ಗೆದ್ದಿಲ್ಲ. ಶಾಮನೂರು ಅನುಪಸ್ಥಿತಿಯಲ್ಲಿ ಗೆಲ್ಲುವ ಅವಕಾಶ. ಬಾಗಲಕೋಟೆಯಲ್ಲಿ ಈ ಹಿಂದೆ ಗೆದ್ದ ಕ್ಷೇತ್ರ ಮರು ತೆಕ್ಕೆಗೆ ತೆಗೆದುಕೊಳ್ಳುವ ಆಸೆ.
2. ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪ ಮತ್ತು ಅಭಿವೃದ್ಧಿ ಕುಂಠಿತವಾಗಿದೆ ಎಂಬ ತನ್ನ ವಾದಕ್ಕೆ ಜನಬಲವಿದೆ ಎಂದು ತೋರಿಸಲು ಬಿಜೆಪಿಗೆ ಈ ಗೆಲುವು ಬಹಳ ಮುಖ್ಯ.
3. ಕೆಳಹಂತದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲು ಮತ್ತು ಮುಂಬರುವ ಚುನಾವಣೆಗಳಿಗೆ ಸಿದ್ಧರಾಗಲು ಈ ಗೆಲುವು ಸಂಜೀವಿನಿಯಿದ್ದಂತೆ.
4. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ತನ್ನ ಸಾಂಪ್ರದಾಯಿಕ ಮತ ಮರಳಿ ತನ್ನತ್ತ ಸೆಳೆಯುವ ಮೂಲಕ, ಕಾಂಗ್ರೆಸ್ನ ಅಲೆ ಕಡಿಮೆಯಾಗಿದೆ ಎಂದು ಸಾಬೀತುಪಡಿಸುವುದು.
ಕಾಂಗ್ರೆಸ್: ಸಮರ್ಥ್/ಜಬ್ಬಾರ್/ಖಾಲಿದ್/ದಾರುಸೇಟ್/ಚಮನ್
ಬಿಜೆಪಿ: ಯಶವಂತ್ ರಾವ್ ಜಾದವ್/ ಅಜಯ್ ಕುಮಾರ್/ ಶ್ರೀನಿವಾಸ್ ದಾಸ್ ಕರಿಯಪ್ಪ/ ದೇವಮುನಿ/ ರಾಜನಹಳ್ಳಿ ಶಿವಕುಮಾರ್ / ವಿನಯ್
ಉಪ ಚುನಾವಣೆಗೆ ನಾವು ತಯಾರಾಗಿದ್ದೇವೆ. ನಮಗೆ ಯಾವುದೇ ಅನುಮಾನವಿಲ್ಲ, ಎಲ್ಲ ವರದಿ ತರಿಸಿಕೊಂಡಿದ್ದೇವೆ. ಎಲ್ಲ ನಾಯಕರ ಜತೆ ಚರ್ಚೆ ನಡೆಸಿದ್ದೇವೆ. ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ.ಡಿ.ಕೆ.ಶಿವಕುಮಾರ್ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಲಾಗಿದೆ, ಕೇಂದ್ರದ ನಾಯಕರು ಘೋಷಿಸಲಿದ್ದು, ಗೆಲ್ಲುವ ರಣತಂತ್ರ ಮಾಡಲಾಗಿದೆ.
ಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಚುನಾವಣಾ ಆಯೋಗದ ಮಾಹಿತಿ
ಚುನಾವಣಾ ಅಧಿಸೂಚನೆ ಪ್ರಕಟ ಮಾರ್ಚ್ 16, 2026
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮಾರ್ಚ್ 23, 2026
ನಾಮಪತ್ರ ಪರಿಶೀಲನೆ ಮಾರ್ಚ್ 24, 2026
ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ ಮಾರ್ಚ್ 26, 2026
ಮತದಾನದ ದಿನಾಂಕ ಏಪ್ರಿಲ್ 9, 2026
ಮತ ಎಣಿಕೆ ಮತ್ತು ಫಲಿತಾಂಶ ಮೇ 4, 2026
ನೀತಿ ಸಂಹಿತೆ ಜಾರಿ
ಉಭಯ ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ.