ವಿಧಾನಸೌಧ 
ರಾಜ್ಯ

ಕಾವೇರಿ 6ನೇ ಹಂತದ ನೀರು ಪೂರೈಕೆ ?

ಬೆಂಗಳೂರು: ಗ್ರೇಟರ್ ಬೆಂಗಳೂರಿಗೆ ಇದೀಗ ಕಾವೇರಿ 6ನೇ ಹಂತದಲ್ಲಿ ನೀರು ಪೂರೈಸಲು ಜಲಮಂಡಳಿ ಮುಂದಾಗಿದೆ.
ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ಪ್ರದೇಶಗಳಿಗೆ ನೀರು ಪೂರೈಕೆಗಾಗಿ ಕಾವೇರಿ 5ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 1.50 ಕೋಟಿ ಜನಸಂಖ್ಯೆಗೆ 2225 ಎಂಎಲ್‌ಡಿ ಕಾವೇರಿ ನೀರು ಪೂರೈಸಲಾಗುತ್ತಿದೆ. ಇದೀಗ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದೆ.
ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಲಮಂಡಳಿ ಯೋಜಿಸಿದಂತೆ 6ನೇ ಹಂತದಲ್ಲಿ 6 ಟಿಎಂಸಿ (500 ಎಂಎಲ್‌ಡಿ) ನೀರನ್ನು ಕೆಆರ್‌ಎಸ್‌ನಿಂದ ನಗರಕ್ಕೆ ತರಲು ನಿರ್ಧಾರ ಮಾಡಿದ್ದು, 6,939 ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗಿದೆ.
ಯೋಜನಾ ವೆಚ್ಚ 5,177 ಕೋಟಿ ರೂ. ಮತ್ತು ಅಗತ್ಯವಿರುವ 130 ಎಕರೆ ಭೂ ಸ್ವಾಧೀನಕ್ಕೆ 1,822 ಕೋಟಿ ರೂ. ನಿಗದಿಪಡಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಹಣವನ್ನು ವಿಶ್ವ ಬ್ಯಾಂಕ್, ಜೈಕಾ, ಹುಡ್ಕೋ ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಜಲಮಂಡಳಿ ಪಡೆಯಲು ನಿರ್ಧಾರ ಮಾಡಿದೆ. ಕಾವೇರಿ 6ನೇ ಹಂತದಲ್ಲಿ 6 ಟಿಎಂಸಿ ನೀರಿನಲ್ಲಿ 4 ಟಿಎಂಸಿಯನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಮತ್ತಿತರ ಪ್ರಮುಖ ಬಡಾವಣೆಗಳಿಗೆ ಹಾಗೂ 2 ಟಿಎಂಸಿಯನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಗನುಗುಣವಾಗಿ ದೇವನಹಳ್ಳಿ, ಹೊಸಕೋಟೆ, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ನೆಲಮಂಗಲ, ಚಿಕ್ಕಬಾಣಾವಾರ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಪೂರೈಸಲು ತೀರ್ಮಾನಿಸಿದೆ.
ಕೆಆರ್‌ಎಸ್ ಜಲಾಶಯದಿಂದ 2 ಕಿಮೀ ದೂರದಲ್ಲಿರುವ ಕಟ್ಟೇರಿ ಗ್ರಾಮದಲ್ಲಿನ ನೀರು ಸಂಸ್ಕರಣಾ ಘಟಕದಲ್ಲಿ ಶೇಖರಣಾ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್ ಮಾಡಲಾಗುತ್ತದೆ. ಬಳಿಕ ಗುರುತ್ವಾಕರ್ಷಣಾ ಬಲದಿಂದ 82 ಕಿಮೀ ದೂರದಲ್ಲಿರುವ ರಾಮನಗರ ಬಳಿಯ ದೇವರ ಹೊಸಹಳ್ಳಿಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರನ್ನು ಹರಿಸಲಾಗುತ್ತದೆ.
ಅಲ್ಲಿಂದ ಪಂಪಿಂಗ್ ಮೂಲಕ 43 ಕಿಮೀ ದೂರದ ಕೆಂಗೇರಿ ಬಳಿಯ ನೈಸ್ ರಸ್ತೆ ಜಂಕ್ಷನ್‌ನಲ್ಲಿ ನಿರ್ಮಿಸುವ 3ನೇ ಶೇಖರಣಾ ಜಲಾಶಯಕ್ಕೆ ತುಂಬಿಸಿ, ನಂತರ 32 ಕೀಮೀ ಉದ್ದದ ಕೊಳವೆ ಅಳವಡಿಸಿ ಜಿಕೆವಿಕೆಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಆನಂತರ ನೀರು ನಿಗದಿತ ಪ್ರದೇಶಗಳಿಗೆ ಹರಿಸುವ ಕುರಿತು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.