Appropriate compensation after crop damage report
ಬರಗೂರು: ಆಲಿಕಲ್ಲು ಮಳೆಗೆ ದಾಳಿಂಬೆ, ಪಪ್ಪಾಯಿ, ಅಡಿಕೆ, ಮಾವು, ತೆಂಗು ಬೆಳೆ ಹಾನಿಯಾಗಿದೆ. ಬೆಳೆ ನಷ್ಟದ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳ ತಂಡ ರಚಿಸಿದ್ದು, ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಶಿರಾ ತಾಲೂಕಿನ ತಡಕಲೂರು ಗ್ರಾಮದಲ್ಲಿ ರೈತರ ತೋಟಗಳಿಗೆ ಮಂಗಳವಾರ ಭೇಟಿ ನೀಡಿ ದಾಳಿಂಬೆ, ರೇಷ್ಮೆ,ಅಡಿಕೆ, ಪಪ್ಪಾಯಿ ಬೆಳೆ ಹಾನಿ ಪರಿಶೀಲನೆ ನಡೆಸಿ ಮಾತನಾಡಿ, ಬೆಳೆಗಳಿಗೆ ಕೆಲವು ರೈತರು ಬೆಳೆ ವಿಮೆ ಕಟ್ಟಿದ್ದಾರೆ, ಕೆಲವು ರೈತರು ಬೆಳೆ ವಿಮೆ ಕಟ್ಟಿಲ್ಲ. ವಿಮೆ ಕಟ್ಟಿರಲಿ, ಬಿಡಲಿ ಮಾನವೀಯತೆ ದೃಷ್ಟಿಯಿಂದ ಸರ್ಕಾರ ರೈತರ ನೆರವಿಗೆ ಧಾವಿಸಲಿದ್ದು, ಸೂಕ್ತ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿ ಪರಿಹಾರ ನೀಡಲಾಗುವುದು ಎಂದರು
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಗೋಣಿಹಳ್ಳಿ, ತಡಕಲೂರು, ಸಿದ್ದನಹಳ್ಳಿ ಸೇರಿದಂತೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇವರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆ ಅಧಿಕಾರಿಗಳ ತಂಡವನ್ನು ಶೀಘ್ರದಲ್ಲಿ ರಚಿಸಿ ಶಿರಾದಲ್ಲಿ ಬೆಳೆ ನಷ್ಟಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ ಅವರಿಗೆ ಸಚಿವ ಪರಮೇಶ್ವರ ಸೂಚಿಸಿದರು.
ತಹಸೀಲ್ದಾರ್ ಆನಂದ್ ಕುಮಾರ್, ತಾಪಂ ಇಒ ಹರೀಶ್, ತೋಟಗಾರಿಕೆ ಜಂಟಿ ನಿರ್ದೇಶಕಿ ಶಾರದಮ್ಮ, ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳಣ್ಣನವರ, ಕೃಷಿ ಸಹಾಯಕ ನಿರ್ದೇಶಕ ಎಚ್.ನಾಗರಾಜು ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.