ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ವಿಮಾನ ನಿಲ್ದಾಣ
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನ (ಎಚ್‌ಎಎಲ್) ವಿಮಾನ ನಿಲ್ದಾಣವು ಹೆಲಿಕಾಪ್ಟರ್‌ಗಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಉಪಗ್ರಹ ಆಧಾರಿತ ‘ರಿಕ್ವೈರ್ಡ್ ನ್ಯಾವಿಗೇಷನ್ ಪರ್ಫಾರ್ಮೆನ್ಸ್- ಕ್ಯಾಟಗರಿ ಎಚ್. (ಆರ್‌ಎನ್‌ಪಿ ಸಿಎಟಿ ಎಚ್) ಕಾರ್ಯವಿಧಾನವನ್ನು ಜಾರಿಗೆ ತಂದ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯನ್ನು ಎಚ್‌ಎಎಲ್‌ನ ಟೆಸ್ಟ್ ಪೈಲಟ್‌ಗಳು, ಉಡ್ಡಯನ ಪರೀಕ್ಷೆಗಳ ಮೂಲಕ ಪ್ರಮಾಣೀಕರಿಸಿದ್ದು, ಇದಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ. ಈ ಹೊಸ ನ್ಯಾವಿಗೇಷನ್ ವ್ಯವಸ್ಥೆಯಿಂದ ಹೆಲಿಕಾಪ್ಟರ್‌ಗಳು, ನಗರ ಪ್ರದೇಶದ ಅಡೆತಡೆ ಮತ್ತು ಕಷ್ಟಕರ ಭೂಪ್ರದೇಶಗಳನ್ನು ದಾಟಿ ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲೂ ಸುರಕ್ಷಿತವಾಗಿ, ನಿಖರವಾಗಿ ಸಂಚರಿಸಬಹುದಾಗಿದೆ. ವಿಮಾನ ನಿಲ್ದಾಣ ತಲುಪಲು ತೆಗೆದುಕೊಳ್ಳುತ್ತಿದ್ದ 12 ನಿಮಿಷಗಳ ಅಪ್ರೋಚ್ ಅವಧಿಯು ಈಗ ಕೇವಲ 4 ನಿಮಿಷಕ್ಕೆ ಇಳಿಕೆಯಾಗಲಿದೆ.
ಈ ಕುರಿತು ಎಚ್‌ಎಎಲ್ ಮುಖ್ಯಸ್ಥ ಮತ್ತು ಎಂಡಿ ಕೆ. ರವಿ ಪ್ರತಿಕ್ರಿಯಿಸಿ, ಹೊಸ ನ್ಯಾವಿಗೇಷನ್ ವ್ಯವಸ್ಥೆಯು ದೇಶದ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಇದು ಹೆಲಿಕಾಪ್ಟರ್ ಕಾರ್ಯಾಚರಣೆಗಳ ಸುರಕ್ಷತೆ, ದಕ್ಷತೆ ಮತ್ತು ಲಭ್ಯತೆ ಹೆಚ್ಚಿಸಲಿದ್ದು, ದೇಶಾದ್ಯಂತ ಇರುವ ಇತರ ವಿಮಾನ ನಿಲ್ದಾಣಗಳಿಗೂ ಮಾದರಿಯಾಗಲಿದೆ ಎಂದರು.
ಈ ತಂತ್ರಜ್ಞಾನ ವಾಯುಪ್ರದೇಶದ ಸಾಮರ್ಥ್ಯ ಹೆಚ್ಚಿಸುವ ಮಾತ್ರವಲ್ಲದೆ ನಗರಗಳ ಮೇಲೆ ಉಂಟಾಗುವ ಶಬ್ದ ಮಾಲಿನ್ಯ ತಗ್ಗಿಸಲಿದೆ. ಏರ್ ಆಂಬ್ಯುಲೆನ್ಸ್ ಮತ್ತು ತುರ್ತು ರಕ್ಷಣಾ ಕಾರ್ಯಚರಣೆಗಳಿಗೆ ವೇಗವಾದ, ಸುರಕ್ಷಿತ ಮಾರ್ಗ ಕಲ್ಪಿಸುತ್ತದೆ. ದಿನಕ್ಕೆ ಅಂದಾಜು 50 ಹೆಲಿಕಾಪ್ಟರ್‌ಗಳು ಈ ವಿಮಾನ ನಿಲ್ದಾಣದಲ್ಲಿ ಸಂಚಾರಿಸಲಿವೆ ತಿಳಿಸಿದರು.