ನಗರದ ಆರೋಗ್ಯ ಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ಯು.ಟಿ. ಖಾದರ್ ನೇಮಕಾತಿ ಪತ್ರ ವಿತರಿಸಿದರು. ರಿತ್ವಿಕ್ ರಂಜನಂ ಪಾಂಡೆ, ಗುರುದತ್ತ ಹೆಗಡೆ ಇತರರಿದ್ದರು.
- * ಆದೇಶ ಪತ್ರ ವಿತರಿಸಿದ ಸಚಿವ ಯು.ಟಿ. ಖಾದರ್
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳಡಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ 51 ಅಭ್ಯರ್ಥಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ನೇಮಕಾತಿ ಆದೇಶ ಪತ್ರ ವಿತರಿಸಿದರು.
ನಗರದ ಆರೋಗ್ಯಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಸಹಾಯಕರು (ಎ್ಡಿಎ), ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ) ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಸಚಿವರು, ಇಲಾಖೆಯ ನೌಕರರ ಕುಟುಂಬದ ಜತೆಗೆ ಸರ್ಕಾರ ಸದಾ ನಿಲ್ಲುತ್ತದೆ. ಹೊಸದಾಗಿ ನೇಮಕಗೊಂಡ ನೌಕರರು ಆರಂಭದಲ್ಲಿನ ಉತ್ಸಾಹ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ವೃತ್ತಿಯುದ್ಧಕ್ಕೂ ಕಾಯ್ದುಕೊಳ್ಳಬೇಕು. ಪ್ರಾದೇಶಿಕ ಆಯುಕ್ತರಿಂದ ಸ್ವೀಕೃತಗೊಂಡ ಸಂಪೂರ್ಣ ದಾಖಲಾತಿಯುಳ್ಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ, ಪಾರದರ್ಶಕ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಇಲಾಖೆಯ ಅಧಿಕಾರಿಗಳು ಅಥವಾ ಸಚಿವರ ಮೇಲೆ ಒತ್ತಡ ತಂದು ವರ್ಗಾವಣೆ ಕೇಳಬಾರದು. ನಿಯೋಜಿತ ಸ್ಥಳಗಳಲ್ಲೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ತಾವು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಕುಷ್ಠರೋಗದಿಂದ ಗುಣಮುಖರಾದ 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದನ್ನು ಸಚಿವರು ಸ್ಮರಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಯುಕ್ತ ಗುರುದತ್ತ ಹೆಗಡೆ, ನಿರ್ದೇಶಕಿ ಡಾ. ಎಂ. ರಜನಿ, ಮುಖ್ಯ ಆಡಳಿತ ಅಧಿಕಾರಿ ಗೀತಾ ಹುಡೇದ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು, ನೌಕರರಿದ್ದರು.