ನೀರಾವರಿ ತಜ್ಞ ಆರ್.ಅಂಜನೇಯ ರೆಡ್ಡಿ  
ರಾಜ್ಯ

ಸುಪ್ರೀಂ ಮಾರ್ಗಸೂಚಿ ಅನ್ವಯ ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ- KSPCB Chairman post

ಹರೀಶ್​​ ಕೆ.ಸಿ.
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿ ನೀರಾವರಿ ತಜ್ಞ ಆರ್.ಅಂಜನೇಯ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ನೀರು, ವಾಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 5ರಲ್ಲಿ ಮಂಡಳಿ ಅಧ್ಯಕ್ಷರಿಗೆ ಪರಿಸರ ಸಂರಕ್ಷಣೆ ಕುರಿತ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಇರಬೇಕೆಂಬ ಅಂಶವಿದೆ. ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ರಾಜ್ಯಗಳು ಸೂಕ್ತ ಮಾರ್ಗಸೂಚಿ ಅಥವಾ ನೇಮಕಾತಿ ನಿಯಮ ರೂಪಿಸಿ ಸೂಕ್ತ ವೃತ್ತಿಪರರು ಮತ್ತು ತಜ್ಞರನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನೇಮಕ ಮಾಡುವಂತೆ ನಿರ್ದೇಶಿಸಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ 2020ರ ಜೂ.19ರಂದು ಕರ್ನಾಟಕ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಹಾಗಾಗಿ, ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಇರುವವರನ್ನೇ ನೇಮಕ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶಾಸಕರ ನೇಮಕದ ಬಗ್ಗೆ ಆಕ್ಷೇಪ:
ಸಂವಿಧಾನದ 191(1)(ಎ) ವಿಧಿಯಡಿ ಸರ್ಕಾರದ ಅಧೀನದಲ್ಲಿರುವ ಲಾಭದಾಯಕ ಹುದ್ದೆಯನ್ನು ಹೊಂದಿರುವುದು ಶಾಸಕರ ಅನರ್ಹತೆಗೆ ಕಾರಣವಾಗಬಹುದು. ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನವು ಸರ್ಕಾರದಿಂದ ನೇಮಕ, ವೇತನ,ಭತ್ಯೆ ಹಾಗೂ ಇತರ ಸೌಲಭ್ಯ ಒಳಗೊಂಡಿರುವುದರಿಂದ ’ಆಫೀಸ್ ಆಫ್ ಪ್ರಾಫಿಟ್’ ವ್ಯಾಪ್ತಿಗೆ ಬರುತ್ತದೆ. ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಹೀರಾತು ಹೊರಡಿಸಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಖ್ಯಾತ ಪರಿಸರ ವಿಜ್ಞಾನಿಯ ನೇತೃತ್ವದಲ್ಲಿ ಶೋಧನಾ ಆಯ್ಕೆ ಸಮಿತಿ ರಚಿಸಬೇಕು.
ಸಮಿತಿಯಲ್ಲಿ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಇಬ್ಬರು ಸ್ವತಂತ್ರ ತಾಂತ್ರಿಕ ತಜ್ಞರನ್ನು ಒಳಗೊಳ್ಳಬೇಕು. ಅನರ್ಹ ವ್ಯಕ್ತಿಯನ್ನು ನೇಮಿಸಿದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಅಂಜನೇಯ ರೆಡ್ಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.