ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ
- ಕಾಯಂ ವೈದ್ಯರಿಲ್ಲದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.
ಈ ಹಿಂದೆ ವೈದ್ಯಾಧಿಕಾರಿಯಾಗಿದ್ದ ಡಾ.ಪ್ರಸನ್ನ ಕುಮಾರ್ ಅವರನ್ನು ತಿ.ನರಸೀಪುರ ತಾಲೂಕಿಗೆ ವರ್ಗಾವಣೆ ಮಾಡಿ ಎರಡು ತಿಂಗಳು ಕಳೆಯುತ್ತಿದ್ದರೂ ಆಸ್ಪತ್ರೆಗೆ ಸರ್ಕಾರ ಕಾಯಂ ವೈದ್ಯರನ್ನು ನೇಮಿಸಿಲ್ಲ. ಸುತ್ತಲಿನ ಹತ್ತಾರು ಹಳ್ಳಿಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ವೈದ್ಯರಿಲ್ಲದಿದ್ದರಿಂದ ಅವರ ಪಾಡು ಹೇಳತೀರದಾಗಿದೆ.
ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಒಬ್ಬ ಸ್ಟಾಫ್‌ನರ್ಸ್ ಬಿಟ್ಟರೆ ಬೇರಾರೂ ಇಲ್ಲ. ಉಳಿದ ಇಬ್ಬರು ನರ್ಸ್‌ಗಳು ಕೆಲಸದ ನಿಮಿತ್ತ ತೆರಳುವುದರಿಂದ ಬೆಳಗ್ಗೆಯಿಂದ ಸಂಜೆವರೆಗೂ ಒಬ್ಬರೇ ನರ್ಸ್ ಕರ್ತವ್ಯ ನಿರ್ವಹಿಸಬೇಕಾದ ದುಸ್ಥಿತಿ ಇದೆ. ಉಳಿದಂತೆ ಒಬ್ಬ ಡಿ ಗ್ರೂಪ್, ಲ್ಯಾಬ್ ಟೆಕ್ನಿಷಿಯನ್, ಪ್ರಥಮ ದರ್ಜೆ ಸಹಾಯಕ ಇದ್ದಾರೆ.
ಕಂಪಲಾಪುರ ಪಿರಿಯಾಪಟ್ಟಣ ತಾಲೂಕಿಗೆ ದೊಡ್ಡ ಗ್ರಾಮವಾಗಿದ್ದು ಸುಮಾರು 10,000 ಜನಸಂಖ್ಯೆ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಗ್ರಾಮದ ಸಮಸ್ಯೆಗಳು ಹಲವಾರು. ಆದ್ದರಿಂದ ಕೂಡಲೇ ಶಾಸಕರು ಇತ್ತ ಗಮನ ಹರಿಸಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸುವತ್ತ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.