ಸವದತ್ತಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಹಾಗೂ ಇತರೆ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಸವದತ್ತಿ ಹಾಗೂ ಯರಗಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸವದತ್ತಿ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ, ಬಾಲಕರ ವಸತಿ ವಿದ್ಯಾರ್ಥಿ ನಿಲಯ, ಇಂಚಲ ಬಾಲಕರ ವಸತಿ ನಿಲಯ, ಮುನವಳ್ಳಿ ಬಾಲಕಿಯರ ವಸತಿ ನಿಲಯ ಹಾಗೂ ಯರಗಟ್ಟಿ ಬಾಲಕಿಯರ ವಸತಿ ನಿಲಯ ಕಾರ್ಯನಿರ್ವಹಿಸುತ್ತಿವೆ. ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ವರ್ಗಗಳಿಗೆ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ., ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೇ 25ರಿಂದ ಆರಂಭವಾಗಲಿದ್ದು, ಜೂ.15 ಕೊನೆಯ ದಿನವಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಗಳ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸವದತ್ತಿ ಹಾಗೂ ಯರಗಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಬಾಲಕರಿಗಾಗಿ ಸವದತ್ತಿ, ಮುನವಳ್ಳಿ, ಸುತಗಟ್ಟಿ, ಹಾರುಗೊಪ್ಪ, ಚಚಡಿ, ಮುರಗೋಡ, ಕಡಬಿ, ಸತ್ತಿಗೇರಿ, ಯರಗಟ್ಟಿ, ತಲ್ಲೂರು, ಹೂಲಿಕಟ್ಟಿ, ಹಿರೇಕುಂಬಿ, ಚಿಕ್ಕೊಪ್ಪ, ಯಕ್ಕುಂಡಿ, ಯರಗಟ್ಟಿಯಲ್ಲಿ ವಸತಿ ನಿಲಯಗಳಿವೆ. ಸವದತ್ತಿಯಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ನಿಲಯ ಇದೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ವರ್ಗಗಳಿಗೆ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ., ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಕೆ ಮೇ 20ರಿಂದ ಆರಂಭವಾಗಲಿದ್ದು, ಜೂ.8 ಕೊನೆಯ ದಿನವಾಗಿದೆ.
ಸವದತ್ತಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿ ವಸತಿ ನಿಲಯಗಳಿಗೆ 2026-27ನೇ ಸಾಲಿನಲ್ಲಿ ಖಾಲಿ ಇರುವ ಸ್ಥಳಗಳಿಗೆ 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ವಸತಿ ನಿಲಯ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜೂ.30ರ ಒಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಮುದ್ರಣ ಪ್ರತಿ ಹಾಗೂ ಆನ್‌ಲೈನ್ ದಾಖಲಾತಿಗಳೊಂದಿಗೆ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರಿಗೆ ಭೌತಿಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.