ಆದರೆ ಅಪ್ಪೆಹುಳಿ ಅಥವಾ ಅಪ್ಪೆಸಾರು ಅಪ್ಪೆಟೈಸರ್ಗೆ ಒಂದು ಉದಾಹರಣೆ ಅಷ್ಟೇ. ಬೇರೆ ರೀತಿಯ ಅಪ್ಪೆಟೈಸರ್ಗಳೂ ಹಲವು ಇರುವುದರಿಂದ ಅದೇ ಪರ್ಯಾಯಪದ ಆಗಲಾರದು. ಇನ್ನೊಬ್ಬ ಓದುಗ ಸೂರಿ ಲಿಂಗದಹಳ್ಳಿ ‘ಹಸಿವಾಳೆ’ ಎಂದು ಸೂಚಿಸಿದ್ದಾರೆ. ಇದೂ ಅಷ್ಟೇ. ಒಂದೆಲಗ ಸೊಪ್ಪು ಅಥವಾ ನೆಲ್ಲಿಕಾಯಿಯನ್ನು ಹಸಿಯಾಗಿಯೇ ತೆಂಗಿನತುರಿ, ಉಪ್ಪು, ಮಸಾಲೆಗಳ ಜೊತೆ ರುಬ್ಬಿ ಮೊಸರು ಅಥವಾ ಮಜ್ಜಿಗೆ ಬೆರೆಸಿ ತಯಾರಿಸುವ ವ್ಯಂಜನಪದಾರ್ಥ. ಮಲೆನಾಡ ಹಳ್ಳಿಗಳಲ್ಲಿ ಬಹಳ ಬಳಕೆಯಲ್ಲಿರುವ ಅಡುಗೆ. ‘ಹಸಿಯಳೆ’ ಅಂತಲೂ ಹೇಳುತ್ತಾರೆ. ಕಸಾಪ ನಿಘಂಟುವಿನಲ್ಲೂ ಇದು ದಾಖಲಾಗಿದೆ. ರುಚಿ ಮತ್ತು ತಯಾರಿಸುವ ವಿಧಾನದಲ್ಲಿ ಅಷ್ಟಿಷ್ಟು ಪ್ರಾದೇಶಿಕ ಭಿನ್ನತೆಯೊಡನೆ ‘ತಂಬುಳಿ’ಯೂ ಹಾಗೆಯೇ. ರುಚಿಯಾಗಿರುತ್ತದೆ, ಹಸಿವನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಗೂ ನೆರವಾಗುತ್ತದೆ. ಇವೆಲ್ಲಕ್ಕೂ ಅನ್ವಯವಾಗುವಂತೆ ಅಪ್ಪೆಟೈಸರ್ಅನ್ನು ಒಟ್ಟಾರೆಯಾಗಿ ಏನೆನ್ನಬಹುದು? ಸಂಸ್ಕೃತದಲ್ಲಿ ಕ್ಷುಧ್ ಅಥವಾ ಕ್ಷುಧಾ ಎಂದರೆ ಹಸಿವು. ‘ಕ್ಷುಧಾಭಿಜನನ’ ಎಂದರೆ ಹಸಿವನ್ನುಂಟುಮಾಡುವ. appetizer ಕೆಲಸವೂ ಅದೇ ತಾನೆ? ಸಿ.ಆರ್ ಮೋಹನಕುಮಾರ್ ಈ ಪದವನ್ನೇ ಸೂಚಿಸಿದ್ದಾರೆ. ‘ಕ್ಷುಧಾವರ್ಧಕ’ ಎಂದು 50ಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ. ವಿಜಯಕುಮಾರ ಪಿ.ಕುಲಕರ್ಣಿ, ಹೊನ್ನಿ ಭಟ್ಟ, ರಮೇಶ್ ಎನ್.ಆರ್, ಅನಿತಾ ಕಿಶೋರ್, ಶ್ರೀಧರ ಸೊಪ್ಪಿಮಠ, ಮಂಜುಳ ಸುಲಾಖೆ, ವಿನೋದ್ ಸಭಾಹಿತ್, ಉಮಾ ಪ್ರಭು, ವಿಜಯಕಲ ವಿಟ್ಲ, ಪದ್ಮಾವತಿ ಐಯರ್, ಶೈಲಜಾ ಮೋಹನ್, ಸೀತಾ ವ್ಯಾಸಮುದ್ರಿ ಮುಂತಾದವರು. ‘ಕ್ಷುತ್ಕಾರಕ’ (ಜಿ.ಕೆ ಲಕ್ಷ್ಮೀನರಸಿಂಹಯ್ಯ), ‘ಕ್ಷುತ್ಚೋದಕ’ (ಗಣಪತಿಭಟ್ಟ ಶಿರಸಿ), ‘ಕ್ಷುತ್ಪ್ರೇರಕ’ (ನಿಶಾಂತ್ ಭಾರದ್ವಾಜ್), ‘ಕ್ಷುಧ್ವರ್ಧಕ’ (ಸಿ.ನರೇಂದ್ರ), ‘ಕ್ಷುಧೋದ್ದೀಪಕ’ (ಎಂ.ಟಿ ಉಪಾಧ್ಯ, ನಟರಾಜು ಬಿ.ಎಸ್) ಮುಂತಾದ ಪದಗಳೂ ಬಂದಿವೆ. ಇವೆಲ್ಲ ಅರ್ಥಪೂರ್ಣವೇನೋ ಹೌದು, ಸಂಸ್ಕೃತ ಪಂಡಿತರಿಗೆಂದೇ ಒಂದು ಔತಣಕೂಟ ಏರ್ಪಡಿಸಿದರೆ ಅಲ್ಲಿ ಅತಿಸೂಕ್ತವಾಗಬಲ್ಲವೂ ಹೌದು. ಆದರೆ ಜನಸಾಮಾನ್ಯರಿಗೆ ದಿನಬಳಕೆಯಲ್ಲಿ ಕಷ್ಟವೆನಿಸಬಹುದು. ಉಪಾಹಾರಗೃಹಕ್ಕೆ ಹೋಗಿ ಈವತ್ತು ‘ಕ್ಷುಧಾಕಾರಕ ಏನಿದೆ?’ ಎಂದು ಕೇಳಿದರೆ ಕರ್ಣಕಠೋರವೇ ಆಗಬಹುದು, ಕೇಳಿಸಿಕೊಂಡವರು ಅಡಿಯಿಂದ ಮುಡಿವರೆಗೆ ನೋಡುವಂತಾಗಬಹುದು.
ಅದಕ್ಕಿಂತ, ಸಂಸ್ಕೃತದ್ದೇ ಆದರೂ ‘ರುಚಿಕಾರಕ’ (ಶ್ರೀಕಾಂತ ಗೋಡಖಿಂಡಿ, ರಾಮಚಂದ್ರ ಬಡಗಾಬೆಟ್ಟು, ನಳಿನಿ ಜಿ.ಭಟ್, ಜಯಶ್ರೀ ಕುಲಕರ್ಣಿ, ಮಧುಕರ ಸೊಪ್ಪಿನ, ದೀಪ್ತಿ ಖಟಾವಕರ, ಆನಂದರಾಮ ಮಡಿ, ಗಿರೀಶ ಕೆ.ಎಸ್, ನಾರಾಯಣ ಮಿಸ್ಕಿನ್ ಮತ್ತಿತರರು) ಸರಳವಿದೆ. ‘ಪಾಚಕ’ (ಅನಘಾ ಪುರಾಣಿಕ, ಡಾ.ಎಸ್.ಎಸ್ ಚೋರಗಿ, ನೀಹಾರಿಕಾ ನಯನ) ಸಹ ಸುಲಭದ್ದೇ. ಅಚ್ಚಕನ್ನಡದಲ್ಲೇ ಆಲೋಚಿಸುತ್ತ ‘ಅರಗು’ (ಜೀರ್ಣಿಸು) ಮತ್ತು ‘ಉಣಿಸು’ (ಆಹಾರಪದಾರ್ಥ) ಇವೆರಡನ್ನು ಜೋಡಿಸಿ, ಅರಗುವ/ಅರಗಿಸುವ ತಿನಿಸು ಎಂಬರ್ಥದಲ್ಲಿ ‘ಅರಗುಣಿಸು’ ಪದ ಕಟ್ಟಿದ ಅನ್ನಪೂರ್ಣ ಹೇಮಚಂದ್ರ ಅವರ ಚಿಂತನಾಕ್ರಮ ಬಹಳ ಚೆನ್ನಾಗಿದೆ. ಹೀಗೆ ಭಾಗಗಳನ್ನು ಜೋಡಿಸಿ ಹೊಸ ಪದ ಕಟ್ಟುವಾಗ ಗಮನಿಸಬೇಕಾದ ಅಂಶವೊಂದಿದೆ. ಭಾಗಗಳೆಲ್ಲ ಒಂದೋ ಸಂಸ್ಕೃತ (ತತ್ಸಮ) ಪದಗಳೇ ಆಗಿರಬೇಕು, ಇಲ್ಲವೇ ಕನ್ನಡ (ತದ್ಭವ) ಪದಗಳೇ ಆಗಿರಬೇಕು. ಎರಡರ ಕಲಬೆರಕೆ ಒಳ್ಳೆಯದಲ್ಲ. ಆದ್ದರಿಂದಲೇ ಹಸಿವುವರ್ಧಕ, ಹಸಿವುತ್ತೇಜಕ, ಹಸಿವೋದ್ದೀಪಕ ರೀತಿಯ ಪ್ರವೇಶಿಕೆಗಳನ್ನು ಪುರಸ್ಕರಿಸಿಲ್ಲ. ಅಂತಹ ಮಿಶ್ರತಳಿಯನ್ನು ಅರಿಸಮಾಸ ಎನ್ನಲಾಗುತ್ತದೆ ಮತ್ತು ವಿದ್ವದ್ವಲಯದಲ್ಲಿ ಅದಕ್ಕೆ ಮಾನ್ಯತೆ ಕಡಿಮೆ. ಕನಾಕಪ ಅಂಕಣವನ್ನು ಆಸಕ್ತಿಯಿಂದ ಓದುವ, ಈ ಚಟುವಟಿಕೆಯನ್ನು ಮೆಚ್ಚಿರುವ ವಿದ್ವಾಂಸ ಶತಾವಧಾನಿ ಡಾ. ರಾ. ಗಣೇಶರು ಅರಿಸಮಾಸ ವಿಚಾರವನ್ನು ಮೊನ್ನೆ ಒಂದು ಪ್ರತಿಕ್ರಿಯೆಯಲ್ಲಿ ಸಂದಭೋಚಿತ ವ್ಯಕ್ತಪಡಿಸಿದ್ದಾರೆ.
ಕಳೆದ ಸಲ ಕೇಳಿದ್ದ Incognito ಪದ ಇಂಗ್ಲಿಷ್ಗೆ ಬಂದದ್ದು ಇಟಾಲಿಯನ್ ಭಾಷೆಯಿಂದ. ನಾಮವಿಶೇಷಣವಾಗಿ disguised under an assumed name and character ಅಂತಲೂ, ಕ್ರಿಯಾವಿಶೇಷಣವಾಗಿ unknown, with concleaned identity ಅಂತಲೂ ಅರ್ಥ. ರಾಮಾಯಣದಲ್ಲಿ ಮಾರೀಚನು ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಣೆದುರಿಗೆ ಸುಳಿದಾಡಿದ್ದು, ರಾವಣನು ಸಂನ್ಯಾಸಿಯ ವೇಷ ಧರಿಸಿ ಬಂದದ್ದು, ಮಹಾಭಾರತದಲ್ಲಿ ಅಜ್ಞಾತವಾಸದ ಒಂದು ವರ್ಷವನ್ನು ಪಂಚಪಾಂಡವರು ನಿಭಾಯಿಸಿದ್ದು ‘ಇಂಕೊಗ್ನಿಟೊ’ಗೆ ಒಳ್ಳೆಯ ಉದಾಹರಣೆಗಳು. ಪುರಾಣಕಥೆಗಳಲ್ಲಿ ದೇವತೆಗಳೂ, ರಾಕ್ಷಸರೂ ಯಾವ್ಯಾವುದೋ ಕಾರಣಗಳಿಗಾಗಿ ವೇಷ ಮರೆಸಿ ಬರುವುದು, ರಾಜರು ಪ್ರಜೆಗಳ ಕ್ಷೇಮಾಭಿವೃದ್ಧಿ ತಿಳಿದುಕೊಳ್ಳಲು ವೇಷ ಬದಲಾಯಿಸಿ ನಗರಸಂಚಾರ ಮಾಡುವುದು ಇವೆಲ್ಲ ಇಂಕೊಗ್ನಿಟೊಗಳೇ. ಅಷ್ಟೇಕೆ, ಮೊನ್ನೆಮೊನ್ನೆ ಕರ್ನಾಟಕದ ಸಾರಿಗೆ ಸಚಿವ ಬೈರತಿ ಸುರೇಶ್ ನಗರಸಾರಿಗೆ ಬಸ್ಸಿನಲ್ಲಿ ತಪಾಸಣೆ ಮಾಡಲೆಂದು ಮುಖಕವಚ ಧರಿಸಿ ಪಯಣಿಸಿದ್ದನ್ನೂ ಇಂಕೊಗ್ನಿಟೊ ಎನ್ನಬಹುದು. ಅಂತರಜಾಲದಲ್ಲಿ ವಿಹರಿಸುವಾಗ ನಾವು ಯಾರೆಂಬ ಗುರುತನ್ನು ಗೋಪ್ಯವಾಗಿಡಬೇಕಿದ್ದರೆ ಇಂಕೊಗ್ನಿಟೊ ರೀತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಇದಕ್ಕೆ ಈಗಾಗಲೇ ಬಳಕೆಯಲ್ಲಿರುವ ‘ಮಾರುವೇಷ’ ಸೂಕ್ತ ಪರ್ಯಾಯ ಪದವೆಂದು ಬಹುಜನರ ಆಯ್ಕೆ. ಎಂ.ಶ್ರೀನಿವಾಸ ಭಟ್, ಕಮಲಾಕರ ಆರ್.ಎಸ್, ಸತ್ಯ ಹರಿಹಳ್ಳಿ, ಯು.ಪರಮೇಶ್ವರ ಭಟ್, ಎಚ್.ಆರ್ ಪ್ರಕಾಶ್, ಲೋಕೇಶಪ್ಪ ಹಿತ್ಲಮನೆ, ಉಮಾಶಂಕರ ಬೆಂಗಳೂರು, ಕಡ್ಡಿ ಕೊಟ್ರೇಶ, ವಿಜಯಲಕ್ಷ್ಮಿ ಎ, ಸುಜಾತ ಕುರ್ಪಾಡ್, ಅಂಜಲಿ ಬರ್ವೆ, ರಂಗನಾಥ ಟಿ.ಕೆ, ಶುಭದಾ ನಾಯಕ, ನರಸಿಂಹಮೂರ್ತಿ ಮಯ್ಯ, ಡಾ.ಎನ್.ಎಂ ತುಳಪುಳೆ, ಕಡೂರು ದೇವೇಂದ್ರ, ಶಶಿಕಲಾ ಮೋಟೆಬೆನ್ನೂರು, ಡಾ.ಜಿ.ಎಸ್ ಉಮೇಶಬಾಬು, ರೇಖಾ ರಾಮಕೃಷ್ಣ, ವಿಶ್ವರಾಜ್ ಕೋಲಾರ ಮುಂತಾದವರು.
‘ಛದ್ಮವೇಷ’ ಎಂದು ಸೂಚಿಸಿ 40ಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ. ನಿಜವಾಗಿ ಈ ಪದದ ಅರ್ಥ Incognito ಎಂದೇ. ಆದರೆ Fancy dress ಎಂಬರ್ಥದಲ್ಲಿ, ಮನೋರಂಜನೆ ಮತ್ತು ಸ್ಪರ್ಧೆಗಳಲ್ಲಿ ಬಹುಕಾಲದಿಂದಲೂ ‘ಛದ್ಮವೇಷ’ ಬಳಕೆಯಾಗುತ್ತಿದೆ. ಮೂಲ ಸಂಸ್ಕೃತದಲ್ಲೂ ಛದ್ಮವೆಂದರೆ ಮೋಸ, ವಂಚನೆ ಇತ್ಯಾದಿ ಕೆಟ್ಟ ಅರ್ಥಗಳೇ ಇವೆ. ಹಾಗಾಗಿ ‘ಛದ್ಮವೇಷ’ವನ್ನು ಆ ಸಂದರ್ಭಗಳಿಗಷ್ಟೇ ಮೀಸಲಿರಿಸುವುದು ಒಳ್ಳೆಯದು. ಅದಕ್ಕಿಂತ ‘ಅಜ್ಞಾತವೇಷ’ (ಭಾರತಿ ಕೋಟ್ನಿಕಲ್, ಶೋಭಾ ಪಿ.ಭಟ್ಟ, ಗಂಗಾ ಹೆಗಡೆ, ವಿಜಯಲಕ್ಷ್ಮಿ ಎಸ್ ಮುಂತಾದವರು), ‘ಗುಪ್ತವೇಷ’ (ಸುವರ್ಣಾ ಮೂರ್ತಿ, ಗುರುರಾಜ್ ಗಲಗಲಿ, ಯಮನಪ್ಪ ಕೋಟ್ನಿಕಲ್, ಉಮೇಶ ಪ್ರಭು), ‘ವೇಷಾಂತರ’ (ವಾಸುಕಿ ವೈದ್ಯ, ನಿತ್ಯಾನಂದ ಬ್ರಹ್ಮಾವರ) ಒಳ್ಳೆಯ ಉದ್ದೇಶಕ್ಕೂ ಕೆಟ್ಟ ಉದ್ದೇಶಕ್ಕೂ ಅನ್ವಯವಾಗುವುದರಿಂದ ಹೆಚ್ಚು ಸಮಂಜಸ. ಅಚ್ಚಕನ್ನಡದಲ್ಲಿ ‘ಮರೆಮಾಚು’ (ಉಷಾಕಿರಣ್ ಅತ್ತಾವರ, ಪೊ›.ಜಿ.ಆರ್ ಅಶ್ವತ್ಥ, ಪ್ರಭಾಕರ ರಾವ್, ರೂಪಕಲ ಸದಾನಂದ, ವಸಂತಕುಮಾರ್ ಕಲ್ಯಾಣಿ, ಶ್ಯಾಮರಾಜ ಉಡುಪ, ಶಾಂತಲಾ ರಾಜಗೋಪಾಲ್) ಕೂಡ ಒಳ್ಳೆಯದೇ.
ಕೊನೆಯದಾಗಿ Location. ಸಾಮಾನ್ಯ ಸಂದರ್ಭಗಳಲ್ಲಾದರೆ ಸ್ಥಳ, ಸ್ಥಾನ, ಠಾವು, ಠಿಕಾಣಿ ಮುಂತಾಗಿ ಸರಳ ಅರ್ಥವೇ. ಆದರೆ ವಿದ್ಯುನ್ಮಾನ ಸಂವಹನದಲ್ಲಿ ‘ಲೊಕೇಷನ್ ಕಳಿಸ್ತೀರಾ?’ ಎನ್ನುವ ಸಂದರ್ಭದಲ್ಲಿ ಇಂಗ್ಲಿಷ್ ಪದಕ್ಕೆ ಬದಲಾಗಿ ಏನನ್ನು ಬಳಸಬಹುದೆಂದು ಕೇಳಿದ್ದಾಗಿತ್ತು. ‘ನೆಲೆ’ ಎಂದು ಸೂಚಿಸಿ ಬಹಳಷ್ಟು ಪ್ರವೇಶಿಕೆಗಳು ಬಂದಿವೆ. ಎನ್.ವಿ ಶಂಕರ್, ಗಂಗಾಚಾರಿ ಬೆಂಗಳೂರು, ಗೀತಾ ಸಂಜೀವಮೂರ್ತಿ, ಸುಧೀರ ಟಂಕಸಾಲಿ, ಸುಬ್ರಹ್ಮಣ್ಯ ಎಸ್, ವಿಲಾಸ ಹುದ್ದಾರ, ನೇತ್ರಾ ಅಣ್ಣಿಗೇರಿ, ಶೋಭಾ ತಿಪಟೂರು ಮುಂತಾದವರು. ‘ಇರುವೆಡೆ’ (ಈಗ ಇರುವ ಎಡೆ ಅಥವಾ ಜಾಗ ಎಂಬರ್ಥದಲ್ಲಿ) ಸೂಕ್ತ ಎಂದಿದ್ದಾರೆ ಪಿ.ಜೆ ರಾಘವೇಂದ್ರ, ಪ್ರಭುಪ್ರಸಾದ್ ನಡುತೋಟ, ವಿಶ್ವಜ್ಯೋತಿ ಶಿವಮೊಗ್ಗ, ರಘುಪತಿ ಚಿಕ್ಕಬಳ್ಳಾಪುರ, ಗುರುಪ್ರಸಾದ್ ನಂಜೀಪುರ, ಡಾ.ದಯಾನಂದ ಭಟ್ಟ ಮತ್ತು ಷಡಕ್ಷರಮುನಿ ಸ್ವಾಮೀಜಿ. ‘ಇರುದಾಣ’ ಆಗಬಹುದೆಂದಿದ್ದಾರೆ ವನಮಾಲಾ ಬೀಜಾಡಿ ಮತ್ತು ಜಿ.ಎಚ್ ಸಂಕಪ್ಪ. ಸ್ಥಳವನ್ನು ಸೂಚಿಸುವ ಪ್ರಕ್ರಿಯೆ ಆದ್ದರಿಂದ ‘ಸ್ಥಳಸೂಚಿ’ ಎಂಬ ಆಯ್ಕೆ ಭಾರತಿ ಅರುಣಕುಮಾರ್, ಆರ್.ವಿ ಮೂರ್ತಿ, ಗೀತಾ ಗುರುಸ್ವಾಮಿ, ವಸುಪ್ರದಾ ಮಂಜುನಾಥ್, ಗಿರೀಶ ಫಡ್ಕೆ, ಸಂತೋಷರಾವ್ ಕಡಬ, ಶೈಲಶ್ರೀ ರಾವ್, ಎಂ.ಕೆ ರಮೇಶ್, ಕೃಷ್ಣ ಬರ್ವೆ, ಗೋಪಾಲಕೃಷ್ಣ ಹೆಮ್ಮಿಗೆ, ಸೀಮಾ ಎಚ್.ಎಸ್, ಉಮಾಶಂಕರ ಬೆಂಗಳೂರು ಮುಂತಾದವರದು. ಇದೆಲ್ಲಕ್ಕಿಂತ ನೇರವಾಗಿ ‘ಎಲ್ಲಿದ್ದೀರಾ?’ ಎಂದು ಕೇಳುವುದು ಅತಿಸುಲಭವೆನ್ನುತ್ತಾರೆ ಎಚ್.ಎಸ್ ಮಂಜುನಾಥ. ಆರೇಳು ವರ್ಷಗಳ ಹಿಂದೊಮ್ಮೆ ಸುದ್ದಿಯಾಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪಾ?’ವನ್ನೂ ಅವರು ನೆನಪಿಸಿಕೊಂಡಿದ್ದಾರೆ. ಅದೇನೋ ಹೌದು, ಆದರೆ ಆಂಗ್ಲವ್ಯಾಮೋಹಿ ಕನ್ನಡಿಗರಾದ ನಾವು ‘ಎಲ್ಲಿದ್ದೀರಾ? ಲೊಕೇಷನ್ ಕಳ್ಸಿ!’ ಎಂದೇ ಕೇಳುತ್ತೇವೆ, ಇಂಗ್ಲಿಷ್ ಪದ ಬಳಸುತ್ತಿದ್ದೇವೆಂಬ ಅರಿವೂ ಇಲ್ಲದೆ. ಅದೇ ವಿಪರ್ಯಾಸ.
ಈ ವಾರದ ಮೂರು ಪದಗಳು
1 Amputate: ಅಪಘಾತದಿಂದಾಗಿಯೋ ಕಾಯಿಲೆಯಿಂದಾಗಿಯೋ ಕೈ-ಕಾಲಿನಂಥ ಅವಯವವನ್ನು ದೇಹದಿಂದ ಕತ್ತರಿಸಿ ತೆಗೆಯುವ ಪ್ರಕ್ರಿಯೆ.
2 Grid: ವಿದ್ಯುತ್ ತಂತಿಗಳ ಜಾಲ, ಭೂಪಟದಲ್ಲಿ ಅಕ್ಷಾಂಶ ರೇಖಾಂಶಗಳ ಜಾಲ, ಪದಬಂಧದಲ್ಲಿ ಸಂಖ್ಯೆಗಳೊಂದಿಗೆ ಕಪ್ಪು-ಬಿಳಿ ಖಾಲಿ ಚೌಕಗಳ ಜಾಲ... ಎಲ್ಲಕ್ಕೂ ಅನ್ವಯವಾಗುತ್ತದೆ.
3 Turbulence: ವಿಮಾನದಲ್ಲಿ ಪಯಣಿಸಿದವರಿಗೆ ಅನುಭವವಿರುತ್ತದೆ, ವಾತಾವರಣದಲ್ಲಿ ಗಾಳಿ ಬೀಸುವಿಕೆಯ ವೇಗ, ದಿಕ್ಕು ಮತ್ತು ಒತ್ತಡದಲ್ಲಿ ಹಠಾತ್ ವ್ಯತ್ಯಾಸವಾಗುವುದು.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)