ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಸಂಘದ ಅಧ್ಯಕ್ಷ ಬಿ.ಎಚ್. ಶಂಕರೇಗೌಡ ನೇತೃತ್ವದ ನಿಯೋಗ 
ರಾಜ್ಯ

ಸಿವಿಲ್ ವ್ಯಾಜ್ಯಗಳ ಕೇಸಿಗೆ ಎಸ್‌ಒಪಿಗೆ ಮನವಿ

ಬೆಂಗಳೂರು: ಸಿವಿಲ್ ವ್ಯಾಜ್ಯ ಪ್ರಕರಣಗಳ ವಿಚಾರಣೆಗೆ ಅನಗತ್ಯವಾಗಿ ನೋಟಿಸ್ ಜಾರಿ ಮತ್ತು ಎಫ್ ಐಆರ್
ದಾಖಲಿಸುವುದರ ಸಂಬಂಧ ಪೊಲೀಸರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಡಿಜಿ-ಐಜಿಪಿಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಮನವಿ ಮಾಡಿದೆ.
ಮಂಗಳವಾರ ನೃಪತುಂಗ ರಸ್ತೆಯಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ ಅವರನ್ನು ಸಂಘದ ಅಧ್ಯಕ್ಷ ಬಿ.ಎಚ್. ಶಂಕರೇಗೌಡ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸಿವಿಲ್ ಆಸ್ತಿಯ ವ್ಯಾಜ್ಯ ಸಂಬಂಧ ದಾಖಲಾಗುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಬ್ ರಿಜಿಸ್ಟ್ರಾರ್‌ಗಳನ್ನು ಮತ್ತು ಇತರೆ ಸಿಬ್ಬಂದಿಯನ್ನು ಅನಗತ್ಯವಾಗಿ ನೋಟಿಸ್ ಕೊಟ್ಟು ಕಿರುಕುಳ ಕೊಡುತ್ತಾರೆ. ಅಲ್ಲದೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಖ್ಯಸ್ಥರ ಪೂರ್ವಾನುಮತಿ ಇಲ್ಲದೆ ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಎಫ್ ಐಆರ್ ದಾಖಲಿಸುತ್ತಿದ್ದಾರೆ.
ಆಸ್ತಿ ನೋಂದಣಿ ಸಮಯದಲ್ಲಿ ನಕಲಿ ದಾಖಲೆ ಅಥವಾ ತಿದ್ದಿದ್ದ ದಾಖಲೆ ಆಧಾರದ ಮೇಲೆ ದಸ್ತಾವೇಜು ನೋಂದಣಿ ಮಾಡಿದರೇ ಉಪನೋಂದಣಾಧಿಕಾರಿಗಳು ಹೊಣೆಗಾರಿಕೆಯನ್ನು ಮಾಡಲು ಸಾಧ್ಯವಿಲ್ಲ. ನಕಲಿ ದಾಖಲೆ ಸೃಷ್ಟಿಸಿದವರು ಮತ್ತು ಪಕ್ಷಕಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿವೆ.
ಭಾರತೀಯ ನಾಗರೀಕ ಸುರಕ್ಷ ಸಂಹಿತೆ 2023ರ ಕಲಂ 218ರಲ್ಲಿ ಉಲ್ಲೇಖಿಸಿವಂತೆ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ವೇಳೆ ಆದಂತಹ ಲೋಪದೋಷಗಳಿಗೆ ಸರ್ಕಾರದ ಪೂರ್ವಾನುಮತಿ ಇಲ್ಲದೆ ಎ್ಐಆರ್ ದಾಖಲಿಸಲು ಅಥವಾ ಬಂಧಿಸಲು ಅಧಿಕಾರ ಇರುವುದಿಲ್ಲ. ಆದರೂ, ಕೆಲವು ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲಿಸುವುದು ಮತ್ತು ನೋಟಿಸ್ ಕೊಟ್ಟು ಠಾಣೆಗೆ ಕರೆಸಿ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ಬಗ್ಗೆ ಪೊಲೀಸರಿಗೆ ಸೂಕ್ತ ಮಾರ್ಗಸೂಚಿ (ಎಸ್‌ಒಪಿ) ನೀಡಬೇಕೆಂದು ಡಿಜಿ-ಐಜಿಪಿಗೆ ನೌಕರರ ಸಂಘ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿರುವ ಡಾ.ಎಂ.ಎ. ಸಲೀಂ, ಶೀಘ್ರ ಕಾನೂನಾತ್ಮಕವಾಗಿ ಮಾರ್ಗಸೂಚಿ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ಇನ್‌ಸ್ಪೆಕ್ಟರ್ ವಿರುದ್ಧವೂ ದೂರು :

ಬೆಳಗಾವಿ ಜಿಲ್ಲೆಯ ಯಮಖನಮರಡಿ ಠಾಣೆ ಇನ್‌ಸ್ಪೆಕ್ಟರ್ ಜಾವೇದ್ ಮುಶಾಪುರಿ, ಇತ್ತೀಚೆಗೆ ನಕಲಿ ದಾಖಲೆ ಆಧಾರದ ಮೇಲೆ ರಿಜಿಸ್ಟ್ರೇಷನ್ ಮಾಡಿದ ಆರೋಪದ ಮೇಲೆ ಸಬ್ ರಿಜಿಸ್ಟ್ರಾರ್‌ಗಳನ್ನು ಏಕಾಏಕಿ ಬಂಧಿಸಿದ್ದರು. ಇದಕ್ಕೂ ಮೊದಲು ಪ್ರಾಥಮಿಕ ವಿಚಾರಣೆ ಮತ್ತು ಇಲಾಖೆ ಮುಖ್ಯಸ್ಥರ ಪೂರ್ವಾನುಮತಿ ಪಡೆಯದೆ ಬೇಜವಾಬ್ದಾರಿ ತನ ತೋರಿದ್ದಾರೆ ಎಂದು ಡಿಜಿಪಿಗೆ ಗಮನಕ್ಕೆ ಸಂಘದ ಪದಾಧಿಕಾರಿಗಳು ತಂದಿದ್ದಾರೆ. ಈ ಬಗ್ಗೆಯೂ ಪರಿಶೀಲನೆಗೆ ಡಿಪಿಜಿ ಸೂಚಿಸಿದ್ದಾರೆ.