Appeal against suspension of District Collector 
ರಾಜ್ಯ

ಜಿಲ್ಲಾಧಿಕಾರಿ ಅಮಾನತಿಗೆ ಪಟ್ಟು

ಹಾರೋಹಳ್ಳಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ ಎರಡು ವರ್ಷಗಳಿಂದ 144 ಸೆಕ್ಷನ್ ಜಾರಿ ಮಾಡಿ ಪ್ರತಿಭಟನೆಯ ಹಕ್ಕನ್ನೇ ಕಸಿದುಕೊಂಡಿರುವ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಕೀಲ ಚಂದ್ರಶೇಖರ್ ಒತ್ತಾಯಿಸಿದರು.
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋರಾಟದ ದನಿಯನ್ನು ಕಸಿಯುತ್ತಿರುವ ಜಿಲ್ಲಾಧಿಕಾರಿ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿರುವ ಇವರನ್ನು ಮೇಲಧಿಕಾರಿಗಳು ಕಂಡರೂ ಕಾಣದಂತೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದು ಜಿಲ್ಲೆಯ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ. ಇವರನ್ನು ಸರ್ಕಾರ ಕೂಡಲೇ ವರ್ಗಾವಣೆಗೊಳಿಸಬೇಕೆಂದು ಎಂದು ಒತ್ತಾಯಿಸಿದರು.
ಸೈನಿಕರು ತಮ್ಮ ನಿವೃತ್ತಿಯ ನಂತರ ಸರ್ಕಾರ ನೀಡುವ ಜಮೀನಿಗಾಗಿ ಅರ್ಜಿ ಸಲ್ಲಿಸಿದರೆ ಕಾಟಾಚಾರಕ್ಕೆ ಮಾಗಡಿ ಬಳಿ ಜಮೀನು ನೀಡಿ, ಯಾವುದೆಂದು ತೋರಿಸಿಲ್ಲ. ಒಂದೇ ಜಮೀನಿಗೆ ಹತ್ತಾರು ಜನರಿಗೆ ನೀಡಿ ಸೈನಿಕರಿಗೆ ಅಲೆಸುವ ಕೆಲಸ ಮಾಡುತ್ತಿದ್ದಾರೆ. ಅವರು ಕೇಳಿದರೆ ಬೇಜವಾಬ್ದಾರಿತನದ ಹೇಳಿಕೆ ನೀಡಿ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಡಿಸಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಯಾವ ರೈತರು ಭೂಮಿ ನೀಡುತ್ತಾರೆ. ಯಾವ ರೈತರು ಭೂಮಿ ನೀಡುವುದಿಲ್ಲ ಎಂದು ಪರಿಶೀಲನೆ ನಡೆಸಿಲ್ಲ. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದು, ಜತೆಗೆ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಅವರ ಕಷ್ಟ ಕೇಳಿಲ್ಲ ಎಂದು ಆರೋಪಿಸಿದರು.