ಹೈಕೋರ್ಟ್​  
ರಾಜ್ಯ

ಜನೌಷಧ ಕೇಂದ್ರಕ್ಕೆ ಅನುಮತಿ ವಿರುದ್ಧ ಮೇಲ್ಮನವಿ| High court

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಏಕಸದಸ್ಯ ನ್ಯಾಯಪೀಠ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿ, ಕೇಂದ್ರ ಸರ್ಕಾರದ ಫಾರ್ಮಸ್ಯುಟಿಕಲ್​ ಆ್ಯಂಡ್​ ಮೆಡಿಕಲ್​ ಡಿವೈಸಸ್​ ಬ್ಯೂರೋ ಆಫ್​ ಇಂಡಿಯಾ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್​ ಜಾರಿ ಮಾಡಿದೆ.
ಸರ್ಕಾರದ ಪರ ಅಡ್ವೊಕೇಟ್​ ಜನರಲ್​ ಕೆ. ಶಶಿಕಿರಣ್​ ಶೆಟ್ಟಿ ವಾದ ಮಂಡಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ನೀಡಬೇಕು ಎನ್ನುವುದು ಸರ್ಕಾರದ ನಿರ್ಧಾರವಾಗಿ. ಹೀಗಾಗಿ, ಆಸ್ಪತ್ರೆಯ ಆವರಣದಲ್ಲಿ ಮಾತ್ರ ಜನೌಷಧಿ ಕೇಂದ್ರಗಳು ಕಾರ್ಯಚರಣೆ ನಡೆಸಬಾರದು ಎಂದು ಆದೇಶ ಹೊರಡಿಸಲಾಗಿದೆ. ಇದನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದರು.
ವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ದಾಖಲಾಗಿರುವ ಮೇಲ್ಮನವಿಗಳನ್ನು ಬೆಂಗಳೂರಿನ ಪೀಠಕ್ಕೆ ವರ್ಗಾಯಿಸುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.