ದೇವಗಿರಿ ಲಕ್ಷ್ಮೀಕಾಂತ ಸಂಘ ಹಾಗೂ ವಾಗ್ದೇವಿ ಭಜನಾ ಮಂಡಳಿಯ ಸಹಯೋಗದಲ್ಲಿ ದಾಸ ಸಾಹಿತ್ಯ ಪ್ರಚಾರಕ ಅಪ್ಪಣ್ಣಾಚಾರ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ ನಡೆಯಿತು.  
ರಾಜ್ಯ

ದಾಸಸಾಹಿತ್ಯಕ್ಕೆ ಅಪ್ಪಣ್ಣಾಚಾರ್ಯರ ಕೊಡುಗೆ ಸ್ಮರಣೀಯ

ದಾಸಸಾಹಿತ್ಯ ಚಿಂತಕರಿಂದ ನುಡಿ ನಮನ

ಬೆಂಗಳೂರು : ದಾಸಸಾಹಿತ್ಯದ ಪ್ರಸಾರ ಪ್ರಚಾರ ಹಾಗೂ ಸಂರಕ್ಷಣೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಕೀರ್ತಿಶೇಷ ಕೆ.ಅಪ್ಪಣ್ಣಾಚಾರ್ಯರ ಸೇವೆ ಸ್ಮರಣೀಯ ಎಂದು ದಾಸಸಾಹಿತ್ಯ ಚಿಂತಕರು ಅಭಿಪ್ರಾಯಪಟ್ಟರು.

ದೇವಗಿರಿ ಲಕ್ಷ್ಮೀಕಾಂತ ಸಂಘ ಹಾಗೂ ವಾಗ್ದೇವಿ ಭಜನಾ ಮಂಡಳಿಯ ಸಹಯೋಗದಲ್ಲಿ ಬನಶಂಕರಿಯ ದೇವಗಿರಿ ರಾಯರ ಮಠದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಪ್ಪಣ್ಣಾಚಾರ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ ನಡೆಯಿತು.

ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟ್‌ನ ಸ್ಥಾಪಕರು ಹಾಗೂ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಪ್ಪಣ್ಣಾಚಾರ್ಯರು, ಮಂತ್ರಾಲಯದ ಹರಿದಾಸ ಸಾಹಿತ್ಯ ವಸ್ತು ಪ್ರದರ್ಶನಾಲಯದ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ದಾಸರ ಸಾಹಿತ್ಯ, ಕೀರ್ತನೆ ಮತ್ತು ಹರಿದಾಸ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದ್ದರು. ಅವರ ಸೇವೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಗಣ್ಯರು ಸ್ಮರಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳ ವತಿಯಿಂದ ಗಾಯನ ನಮನ ಸಲ್ಲಿಸಲಾಯಿತು. ಬಳಿಕ ದಾಸಸಾಹಿತ್ಯ ಚಿಂತಕರು ಹಾಗೂ ವಿದ್ವಾಂಸರು ಅವರ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಸೇವೆಯ ವಿವಿಧ ಆಯಾಮಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಾಗ್ಮಿ ಪಂಡಿತ್ ಕಲ್ಲಾಪುರ ಪವಮಾನಾಚಾರ್ಯ, ಪಂಡಿತ್ ಕರ್ನೂಲು ಶ್ರೀನಿವಾಸ್ ಆಚಾರ್ಯ,ಹರಿದಾಸ ಮಹಾವಿದ್ಯಾಲಯದ ನಿರ್ದೇಶಕ ಡಾ. ಪರಶುರಾಮ ಬೆಟಗೇರಿ ಮತ್ತಿತರರು ಪಾಲ್ಗೊಂಡಿದ್ದರು.