ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಸಮಾರಂಭದಲ್ಲಿ ಸವಿತಾ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ನೆರವೇರಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್,ಗೌರೀಶ್, ಪುಷ್ಪ, ಶ್ರೀಪಾದ್ ನಾಲವತ್ತವಾಡಕರ್ ಇತರರಿದ್ದಾರೆ.
ಹುಣಸೂರು: ಸಮಾಜದಲ್ಲಿ ಅಸಮಾನತೆ ಮತ್ತು ಮೌಢ್ಯಗಳನ್ನು ತೊಲಗಿಸಲು ಜಗಜ್ಯೋತಿ ಬಸವಣ್ಣರಿಗೆ ಮೊದಲ ಮೆಟ್ಟಿಲಾಗಿ ದುಡಿದವರು ವಚನಕಾರ ಹಡಪದ ಅಪ್ಪಣ್ಣ ಎಂದು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಹಲವು ಮೂಢನಂಬಿಕೆಗಳು ತಾರತಮ್ಯದ ಪರಮಾವಧಿಯ ಮಟ್ಟ ತಲುಪಿದ್ದವು. ಸವಿತಾ ಸಮಾಜದ ವ್ಯಕ್ತಿಯನ್ನು ನೋಡಿದರೆ ಅಪಶಕುನ ಎನ್ನುವಂತಹ ಮೌಢ್ಯ ಜನರಲ್ಲಿತ್ತು. ಇವೇ ಮುಂತಾದ ಹಲವು ಮೌಢ್ಯಗಳನ್ನು ತೊಲಗಿಸಲು ಬಸವಣ್ಣ ಅನುಭವ ಮಂಟಪ ಸ್ಥಾಪಿಸಿ ಎಲ್ಲ ಸಮುದಾಯದವರಿಗೂ ಸ್ಥಾನ ನೀಡಿದ್ದಲ್ಲದೇ ತನ್ನ ಆಪ್ತ ಕಾರ್ಯದರ್ಶಿಯಾಗಿ ಸವಿತಾ ಸಮಾಜದ ಹಡಪದ ಅಪ್ಪಣ್ಣ ಅವರನ್ನು ನೇಮಿಸಿಕೊಂಡು ಅಪ್ಪಣ್ಣರ ಮೂಲಕವೇ ತನ್ನ ಭೇಟಿಯಾಗುವಂತಹ ವ್ಯವಸ್ಥೆ ಮಾಡಿದ್ದರು. ಆ ಮೂಲಕ ಜನರಲ್ಲಿದ್ದ ಮೌಢ್ಯ ತೊಲಗಿಸಲು ಅಪ್ಪಣ್ಣ ಮೊದಲ ಮೆಟ್ಟಿಲಾದರು. ಜತೆಗೆ ಬಸವಣ್ಣರ ಕೀರ್ತಿ ಪತಾಕೆ ಹೆಚ್ಚಿಸುವಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದ ಹಡಪದ ಅಪ್ಪಣ್ಣ ಸಹ ಕಾರಣಕರ್ತರಾದರು ಎಂದರು.
ರಂಗಕಲಾವಿದ ಎಸ್.ಜಯರಾಂ ಮಾತನಾಡಿ, ಅಂದು ಅನುಭವ ಮಂಟಪ ಎಲ್ಲರನ್ನೂ ಸಮಾನತೆಯಿಂದ ಕಾಣುವ ವೇದಿಕೆಯನ್ನು ಸೃಷ್ಟಿಸಿದ್ದರೆ ಇಂದು ಸಂವಿಧಾನ ಇದೇ ಮೌಲ್ಯವನ್ನು ಸಾರುತ್ತಿದೆ. ಸವಿತಾ ಸಮಾಜದ ಧೀಮಂತ ರಾಜ ಬಿಜ್ಜಳ ರಾಜನಾಗಿ ಅತ್ಯುತ್ತಮ ಸೇವೆ ನೀಡಿದ್ದಾನೆ. ಸವಿತಾ ಸಮಾಜ ರಾಜವಂಶವನ್ನೇ ಹೊಂದಿರುವಾಗ ಸಮಾಜದ ಕುರಿತು ನೀವು ಕೀಳರಿಮೆ ತಳೆಯಬಾರದು. ಹಡಪದ ಅಪ್ಪಣ್ಣ ಬಸವಣ್ಣರ ಜೋಡಿ ಮತ್ತು ಅವರು ನೀಡಿದ ಸಂದೇಶಗಳೂ ಕೂಡ ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿವೆ ಎಂದರು.
ದಲಿತ ಮುಖಂಡ ಡಿ.ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಅತಿಹೆಚ್ಚು ಅಂಕಗಳಿಸಿದ ಸವಿತಾ ಸಮಾಜದ ವಿದ್ಯಾರ್ಥಿನಿಯರಾದ ಹೇಮಾ ಶೀತಲ್, ಸುಶ್ಮಿತಾ, ಭೂಮಿಕಾ, ಲಕ್ಷ್ಮೀ ಮತ್ತು ಸಹನಾ ಅವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿಸಲಾಯಿತು. ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗೌರೀಶ್, ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ರಮೇಶ್, ಮುಖಂಡರಾದ ಕೃಷ್ಣ, ಜಗದೀಶ್, ಸತೀಶ್, ಉಮೇಶ್, ಸದಾಶಿವ, ಮೂರ್ತಿ, ಮನುಕುಮಾರ್, ಭರತ್ ಕುಮಾರ್, ಸೋಮಶೇಖರ್, ಪ್ರಕಾಶ್, ವಕೀಲ ಪುಟ್ಟರಾಜು, ಗ್ರೇಡ್ 2 ತಹಸೀಲ್ದಾರ್ ಪುಷ್ಪಾ, ಶಿರಸ್ತೇದಾರ್ ಶ್ರೀಪಾದ ನಾಲವತ್ತವಾಡಕರ್, ಟಿಎಚ್‌ಒ ಎಸ್.ಗಿರಿಧರ್, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜ್, ಸಿಡಿಪಿಒ ಸಿ.ಬೋರೇಗೌಡ ಇತರರು ಇದ್ದರು.