ಸಾಂದರ್ಭಿಕ ಚಿತ್ರ 
ರಾಜ್ಯ

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಅಪೆಕ್ಸ್​ ಬ್ಯಾಂಕ್​

ಶ್ರವಣ್ ನೀರಬಿದಿರೆ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಣೆ
  • ರಾಜ್ಯ ಮಾಹಿತಿ ಆಯೋಗದ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್​ ಬ್ಯಾಂಕ್​ ಅನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿರುವ ರಾಜ್ಯ ಮಾಹಿತಿ ಆಯೋಗವು ತಕ್ಷಣವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವನ್ನು ನೇಮಿಸುವಂತೆ ನಿರ್ದೇಶನ ನೀಡಿದೆ.
ಹನುಮಂತ ವಸಂತ ಶಿಂಧೆ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮಾಹಿತಿ ಆಯೋಗವು ಈ ಆದೇಶ ನೀಡಿದೆ. ಅರ್ಜಿದಾರರು ನಿರಾಣಿ ಶುಗರ್ಸ್​ ಲಿಮಿಟೆಡ್​ ಸಂಸ್ಥೆಯು ಮಾರ್ಚ್​ 2022ರಿಂದ ಜೂನ್​ 2024ರವರೆಗೆ ಅಪೆಕ್ಸ್​ ಬ್ಯಾಂಕಿನಿಂದ ಪಡೆದ ಸಾಲಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್​ ತಾವು ಸಹಕಾರ ಸಂಘವಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ನೀಡಲು ನಿರಾಕರಿಸಿತ್ತು.
ಬ್ಯಾಂಕ್​ನ ಈ ವಾದವನ್ನು ರಾಜ್ಯ ಮಾಹಿತಿ ಆಯುಕ್ತ ಎಸ್​. ರಾಜಶೇಖರ ತಳ್ಳಿಹಾಕಿದ್ದಾರೆ. ಅಪೆಕ್ಸ್​ ಬ್ಯಾಂಕ್​ನ ಕಾರ್ಯಾಚರಣೆಯ ಮೇಲೆ ಸರ್ಕಾರದ ಆಳವಾದ ಮತ್ತು ವ್ಯಾಪಕ ನಿಯಂತ್ರಣ ಇದೆ ಎಂಬುದನ್ನು ಅವರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇತಿಹಾಸ ಮತ್ತು ಸರ್ಕಾರದ ಪಾತ್ರ

ಆದೇಶದಲ್ಲಿ ಬ್ಯಾಂಕಿನ ಇತಿಹಾಸವನ್ನು ವಿವರವಾಗಿ ಪರಿಶೀಲಿಸಲಾಗಿದೆ. ಹಳೆ ಮೈಸೂರು ರಾಜ್ಯದಲ್ಲಿ ಆರಂಭವಾದ ಸಹಕಾರ ಚಳುವಳಿಯ ಭಾಗವಾಗಿ ಸಹಕಾರ ಸಂಘಗಳ ನಿಬಂಧಕರು ಈ ಬ್ಯಾಂಕನ್ನು ಸ್ಥಾಪಿಸಿದ್ದರು ನಂತರದ ಅವಧಿಯಲ್ಲಿ ಸರ್ಕಾರದ ನೀತಿ ಹಾಗೂ ಮಾರ್ಗಸೂಚಿಗಳ ಮೂಲಕ ಬ್ಯಾಂಕಿನ ಕಾರ್ಯಾಚರಣೆಯ ಮೇಲೆ ಸರ್ಕಾರದ ಪ್ರಭಾವ ಮುಂದುವರೆದಿದೆ ಎಂದು ಆಯೋಗ ಉಲ್ಲೇಖಿಸಿದೆ. 

ಸರ್ಕಾರದ ಮೇಲ್ವಿಚಾರಣೆ

ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಸಹಕಾರ ಸಂಘಗಳ ನೋಂದಣಾಧಿಕಾರಿ ಎಕ್ಸ್​ಆಫೀಶಿಯೊ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಅಡಿಯಲ್ಲಿ ಸರ್ಕಾರಕ್ಕೆ ಬ್ಯಾಂಕಿನ ದಾಖಲೆಗಳನ್ನು ಪರಿಶೀಲಿಸುವುದು, ತನಿಖೆ ನಡೆಸುವುದು ಮತ್ತು ಆಡಿಟ್​ ಮಾಡಲು ಆದೇಶಿಸುವ ಅಧಿಕಾರವಿದೆ ಎಂದು ಆಯೋಗ ತಿಳಿಸಿದೆ.
ಇದಲ್ಲದೆ ಅಪೆಕ್ಸ್​ ಮಟ್ಟದ ಸಹಕಾರ ಸಂಸ್ಥೆಗಳ ಆಡಿಟ್​ ವರದಿಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ವಿಧಾನಸಭೆಯ ಮುಂದೆ ಇಡುವುದು ಕಡ್ಡಾಯವಾಗಿದೆ. ಬ್ಯಾಂಕ್​ ಮೇಲೆ ಭಾರತೀಯ ರಿಸರ್ವ್​ ಬ್ಯಾಂಕ್​ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ ನಿಯಂತ್ರಣವೂ ಇದೆ. ಈ ಎಲ್ಲ ಕಾರಣಗಳಿಂದ ಅಪೆಕ್ಸ್​ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ಆಯೋಗ ಘೋಷಿಸಿದೆ.