- ಟ್ರಾವೆಲ್ ಏಜೆಂಟ್ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ
- ಉಗ್ರನಿಗೆ ಪಾಸ್ಪೋರ್ಟ್ ಪಡೆಯಲು ಸಹಕರಿಸಿದ ಆರೋಪ
ಬೆಂಗಳೂರು: ದೇಶ ವಿರೋಧಿ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗುವವರು ಮಾತ್ರವಲ್ಲದೆ, ಅದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸುವವರು ಮತ್ತು ತಮ್ಮಬೇಜವಾಬ್ದಾರಿಯಿಂದ ಆಸ್ಪದ ಮಾಡಿಕೊಡುವವರಿಂದಲೂ ದೇಶಕ್ಕೆ ಅಪಾಯವಿದೆ. ಅಂತವರನ್ನು ಪತ್ತೆಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರನೊಬ್ಬನಿಗೆ ನಕಲಿ ದಾಖಲೆಗಳ ಮೂಲಕ ಪಾಸ್ಪೋರ್ಟ್ ನವೀಕರಿಸಲು ನೆರವು ನೀಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಯು.ಎಂ. ಹೈದರ್ ಎಂಬಾತ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಆರೋಪಿಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಟ್ರಾವೆಲ್ ಏಜೆನ್ಸಿಯಿದೆ.
ಅರ್ಜಿದಾರನಿಗೆ ಅಂಗವೈಕಲ್ಯವಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅರ್ಜಿದಾರನ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಅಂಕವಿಕಲತೆ ಅಥವಾ ಅನಾರೋಗ್ಯದ ನೆಪಗಳನ್ನು ಹೇಳಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಗಂಭೀರ ಪ್ರಕರಣಗಳಿಂದ ತಪ್ಪಿಸಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ದೇಶಕ್ಕೆ ಅಪಾಯ ತರುವ ವ್ಯಕ್ತಿಯು ಸಾಮಾನ್ಯ ಪ್ರಜೆ, ಮಧ್ಯವರ್ತಿ ಅಥವಾ ಸಾರ್ವಜನಿಕ ಸೇವಕನೇ (ಪೊಲೀಸ್, ಸರ್ಕಾರಿ ಅಧಿಕಾರಿ) ಆಗಿರಲಿ, ಅವರ ವಿರುದ್ಧ ಕ್ರಮ ಯಾವುದೇ ಬೇಧವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ:
ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸರ ತನಿಖೆಯಿಂದ ಈ ವಂಚನೆ ಬೆಳಕಿಗೆ ಬಂದಿತ್ತು. ತನ್ನ ಟ್ರಾವೆಲ್ ಏಜೆನ್ಸಿಗೆ ಬರುತ್ತಿದ್ದ ವ್ಯಕ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದ ಆರೋಪಿ ಹೈದರ್, ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದ. ಹೀಗೆ ನವೀಕರಣಗೊಳಿಕೊಟ್ಟಿದ್ದ ಪಾಸ್ಪೋರ್ಟ್ಗಳ ಪೈಕಿ, ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಇಬ್ರಾಹಿಂ ಖಲೀಲ್ ಎಂಬಾತನ ಪಾಸ್ಪೋರ್ಟ್ ಕೂಡ ಸೇರಿತ್ತು. ಈ ಬಗ್ಗೆ ಸುದೀರ್ ತನಿಖೆ ನಡೆಸಿದ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಅದರಲ್ಲಿ ಹೈದರ್ನನ್ನು ಈ ಜಾಲದ ಪ್ರಮುಖ ಸಂಚುಕೋರನಾಗಿ ಹೆಸರಿಸಲಾಗಿತ್ತು.
⚠️ 15 ಪಾಸ್ಪೋರ್ಟ್ಗಳಿಗೆ ಒಂದೇ ವಿಳಾಸ!
ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಮತ್ತು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರ ಹೈದರ್ ಸಾಮಾನ್ಯ ಏಜೆಂಟ್ ಅಲ್ಲ. ಈತ ಬರೋಬ್ಬರಿ 15 ಪಾಸ್ಪೋರ್ಟ್ ಅರ್ಜಿಗಳಲ್ಲಿ ಅರ್ಜಿದಾರರ ನೈಜ ವಿಳಾಸದ ಬದಲಾಗಿ ತನ್ನದೇ ಟ್ರಾವೆಲ್ ಏಜೆನ್ಸಿಯ ವಿಳಾಸವನ್ನು ನಮೂದಿಸಿ ವಂಚಿಸಿದ್ದಾನೆ ಎಂದು ದಾಖಲೆ ಸಮೇತ ವಿವರಿಸಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಎಂದು ಮತ್ತು ಸ್ಥಳಿಯ ಪ್ರೌಢಶಾಲೆಯ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಸೃಷ್ಟಿಸಿ ಈ ವಂಚನೆ ಎಸಗಲಾಗಿತ್ತು.
ಪೊಲೀಸ್ ಕಾನ್ಸ್ಟೇಬಲ್ಗೂ ಇದೆ ಪಾಲು:
ಈ ಇಡೀ ಜಾಲದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಲಕ್ಷ$್ಮಣ್ ವಿರುದ್ಧವೂ ಗಂಭೀರ ಆರೋಪಗಳಿವೆ. ಒಂದೇ ವಿಳಾಸದಲ್ಲಿದ್ದ 15 ಅರ್ಜಿಗಳಿಗೆ ಯಾವುದೇ ಸ್ಥಳ ಪರಿಶೀಲನೆ ನಡೆಸದೇ ಈತ ಕ್ಲಿಯರೆನ್ಸ್ ನೀಡಿದ್ದ. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ ಅನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಕಾನ್ಸ್ಟೇಬಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆಯ ಅನುಮತಿ ಕೋರಲಾಗಿದ್ದು, ಅದನ್ನು ಅತ್ಯಂತ ಶೀಘ್ರವಾಗಿ ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.