K H Muniyappa | ಆಹಾರ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ಅಸಮಾಧಾನದ ಜ್ವಾಲೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಬೆನ್ನಲ್ಲೇ ಇದೀಗ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರೂ ಸಹ ಬಂಡಾಯದ ಬಾವುಟ ಹಾರಿಸಿದ್ದಾರೆ. ನಾನು ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕನಾಗಿದ್ದೇನೆ, ಹಾಗಾಗಿ ನನಗೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಎಂದು ಆಗ್ರಹಿಸಿರುವ ಮುನಿಯಪ್ಪ, ತಮಗೆ ಸದ್ಯ ನೀಡಿರುವ ಆಹಾರ ಇಲಾಖೆಯ ಖಾತೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನನಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ತಕ್ಷಣವೇ ತಮಗೆ ಪ್ರಮುಖ ಖಾತೆಯನ್ನು ಬದಲಾಯಿಸಿಕೊಡಬೇಕು ಎಂದು ಹೈಕಮಾಂಡ್ ಬಳಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಖಾತೆ ಹಂಚಿಕೆಯಲ್ಲಿ ಹಿರಿತನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ ಸಚಿವ ಮುನಿಯಪ್ಪ, ನಾನು ಎಂಟು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ನಾಯಕ. ಆದರೆ ಈ ಬಾರಿ ಖಾತೆ ಹಂಚಿಕೆಯಲ್ಲಿ ಸೀನಿಯಾರಿಟಿಯನ್ನು ಪರಿಗಣಿಸಿಲ್ಲ, ಯಾವುದೇ ಸಮಾತೋಲನವನ್ನೂ ಕಾಯ್ದುಕೊಂಡಿಲ್ಲ. ನಾನು ಪಕ್ಷದಲ್ಲಿ ತಾಯಿಯ ಸ್ಥಾನದಲ್ಲಿದ್ದೇನೆ. ತಾಯಿ ಆದವರು ಎಲ್ಲಾ ಮಕ್ಕಳನ್ನು ಒಂದೇ ಕಣ್ಣಿನಿಂದ ನೋಡಬೇಕು, ಆದರೆ ಇಲ್ಲಿ ಆ ರೀತಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
2028ರ ಚುನಾವಣೆಗೆ ಎಚ್ಚರಿಕೆ!
ಈಗ ನೀಡಿರುವ ಖಾತೆ ಸರಿಯಾಗಿಲ್ಲ. ಪ್ರೋಟೋಕಾಲ್ ಪ್ರಕಾರ ಹಿರಿತನವನ್ನು ನೋಡಿ ಖಾತೆ ಹಂಚಿಕೆ ಮಾಡಬೇಕಿತ್ತು. ಪಕ್ಷದಲ್ಲಿ ಇದೇ ರೀತಿ ತಾರತಮ್ಯ ಮುಂದುವರಿದರೆ ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಕಷ್ಟ ಎದುರಾಗಲಿದೆ ಎಂದು ಮುನಿಯಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಖಾತೆ ಬದಲಾವಣೆಗೆ ದೆಹಲಿ ನಾಯಕರ ಬಳಿ ಪಟ್ಟು
ಕಳೆದ ಮೂರು ವರ್ಷಗಳಿಂದ ನಾನು ಆಹಾರ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ನನಗೆ ಈಗ ಜನಸೇವೆ ಮಾಡಲು ಮುಕ್ತ ಅವಕಾಶವಿರುವ ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ದೊಡ್ಡ ಖಾತೆಗಳನ್ನು ನೀಡಬೇಕೆಂದು ಕೇಳಿದ್ದೆ. ಈ ನಿಟ್ಟಿನಲ್ಲಿ ಈಗಾಗಲೇ ಎಐಸಿಸಿ ಅಧ್ಯಕ್ಷರನ್ನು ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಿ ಎಂದು ಹೈಕಮಾಂಡ್‌ಗೆ ಹೇಳಿದ್ದೇನೆ. ನನ್ನ ಖಾತೆಯನ್ನು ಬದಲಾವಣೆ ಮಾಡಿಕೊಡುತ್ತಾರೆಂಬ ನಂಬಿಕೆ ನನಗಿದೆ ಎಂದು ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.