Triple murder 
ರಾಜ್ಯ

ನಗರದಲ್ಲಿ ಮತ್ತೊಂದು ತ್ರಿವಳಿ ಮರ್ಡರ್

ಪ್ರಮುಖ ಮುಖ್ಯಾಂಶಗಳು

  • ಆರೋಪಿ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ
  • ತಂದೆ ದೂರಿನನ್ವಯ ಪ್ರಕರಣ ದಾಖಲು
  • ಆರೋಪಿ ಮಾನಸಿಕ ಅಸ್ವಸ್ಥ, ತನಿಖೆ
ಬೆಂಗಳೂರು: ನಗರದ ಕೆ.ಆರ್.ಪುರದಲ್ಲಿ ಹಣಕಾಸಿನ ವಿಚಾರವಾಗಿ ಒಂದೇ ಕುಟುಂಬದ ಮೂವರ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅದೇ ಮಾದರಿಯ ಮತ್ತೊಂದು ತ್ರಿವಳಿ ಕೊಲೆ ನಡೆದಿದೆ.
ಕಾಮಾಕ್ಷಿಪಾಳ್ಯ ಸಮೀಪದ ಕೊಟ್ಟಿಗೆಪಾಳ್ಯದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ತಾಯಿ, ಅಜ್ಜಿ ಹಾಗೂ ಸೋದರ ಮಾವನನ್ನು ಮಾರಕಾಸ್ತ್ರದಿಂದ ಬರ್ಭರವಾಗಿ ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಪ್ರಶಾಂತ್(37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅದಕ್ಕೂ ಮೊದಲು ತನ್ನ ತಾಯಿ ಮಂಗಳಮ್ಮ(55), ಅಜ್ಜಿ ನಂಜಮ್ಮ(65) ಮತ್ತು ಸಹೋದರ ಮಾವ ಸತೀಶ್(50) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ದುರ್ಘಟನೆ ನಡೆದಿದೆ. ಈ ಸಂಬಂಧ ಕೊಲೆ ಆರೋಪಿ ಪ್ರಶಾಂತ್ ತಂದೆ ಚಿಕ್ಕಣ್ಣ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಕುಣಿಗಲ್ ಮೂಲದ ಚಿಕ್ಕಣ್ಣ ಕಳೆದ 8 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಕೆಲ ವರ್ಷಗಳ ಹಿಂದಷ್ಟೇ ಕೊಟ್ಟಿಗೆಪಾಳ್ಯದಲ್ಲಿ ಪುತ್ರ, ಭಾಮೈದಾ, ಪತ್ನಿ, ತಾಯಿ ಜತೆಗೆ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದರು. ಚಿಕ್ಕಣ್ಣ ಇಸ್ತ್ರಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದರು. ತಾಯಿ ಮಂಗಳಮ್ಮ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ನಂಜಮ್ಮ ಮನೆಯಲ್ಲೇ ಇರುತ್ತಿದ್ದರು. ಮಾವ ಸತೀಶ್ ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಪ್ರಶಾಂತ್ ಕ್ಯಾಬ್ ಚಾಲಕನಾಗಿದ್ದ. ಮಾವ ಸತೀಶ್ ಹಾಗೂ ಪ್ರಶಾಂತ್ ಅವಿವಾಹಿತನಾಗಿದ್ದ. 
ಮಾನಸಿಕ ಅಸ್ವಸ್ಥ:
ಆರೋಪಿ ಪ್ರಶಾಂತ್ ನಾಲ್ಕು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಆತನ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಜತೆಗೆ ಈತ ಮುಂಗೋಪಿಯಾಗಿದ್ದನು. ಆದರೆ, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲವನ್ನು ಹೊರಗಡೆ ಎಸೆಯುತ್ತಿದ್ದ. ಹೀಗಾಗಿ ಆತ ಮತ್ತಷ್ಟು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ಯಾವಾಗಲು ಕುಟುಂಬದ ಸದಸ್ಯರ ಜತೆ ಜಗಳ ಮಾಡುತ್ತಿದ್ದ. ಕ್ಯಾಬ್ ಚಾಲನೆಗೆ ಹೋದಾಗಲು ಕೆಲ ಗ್ರಾಹಕರ ಜತೆ ವಾಗ್ವಾದ ಮಾಡಿಕೊಂಡಿರುವ ಮಾಹಿತಿಯೂ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರಕಾಸ್ತ್ರದಿಂದ ಮನಬಂದಂತೆ ಕೊಚ್ಚಿ ಕೊಲೆ

ಇತ್ತೀಚೆಗೆ ಮನೆಯಲ್ಲಿ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು, ಶನಿವಾರ ಬೆಳಗ್ಗೆ ಕೂಡ ಮಾವ ಸತೀಶ್ ಜತೆ ಜಗಳ ಮಾಡಿಕೊಂಡಿದ್ದ ಆರೋಪಿ, ಗಲಾಟೆ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಮಾವನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಕೋಣೆಯಲ್ಲಿ ಜೋರಾಗಿ ಶಬ್ದ ಕೇಳುತ್ತಿದ್ದಂತೆ ಬಂದ ತಾಯಿ ಮಂಗಳಮ್ಮ ಮತ್ತು ಅಜ್ಜಿ ನಂಜಮ್ಮಮೇಲೂ ಆರೋಪಿ ಮಾರಕಾಸ್ತ್ರದಿಂದ ಎದೆ, ಕತ್ತು, ಬುಜದ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಇಬ್ಬರು ಮನೆಯ ಹೊಸ್ತಿನಲ್ಲೇ ಹತ್ಯೆಯಾಗಿದ್ದಾರೆ. ತಾಯಿಯ ಮುಖಕ್ಕೆ ಐದಾರು ಬಾರಿ ಹೊಡೆದಿದ್ದರಿಂದ ಮುಖ ಗುರುತು ಸಿಗದಂತಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ತಂದೆ ಮನೆಯಲ್ಲಿರದಿದ್ದಾಗ ಮಾರಕಾಸ್ತ್ರ ಬಳಸಿ ಪ್ರಶಾಂತ್ ಮೂವರನ್ನೂ ಹತ್ಯೆಗೈದಿದ್ದಾನೆ. ಮನೆಯವರ ಕಿರುಚಾಟ ಕೇಳಿ ಬಂದಿದ್ದ ಅಕ್ಕಪಕ್ಕದವರು ಆರೋಪಿಯನ್ನು ಹಿಡಿದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆ ಹೊಂದಿದ್ದ ಎಂದು ಹೇಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ. 

ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಶಾಂತ 

ಮನೆಯಲ್ಲಿ ಮೂರನ್ನು ಹತ್ಯೆಗೈದ ಬಳಿಕ ಆರೋಪಿ ಮನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮನೆಯಲ್ಲಿ ಕೂಗಾಟ ಕೇಳಿ ಮನೆ ಮಾಲೀಕರು ಹಾಗೂ ಅಕ್ಕ-ಪಕ್ಕದ ನಿವಾಸಿಗಳು ಮನೆ ಬರುತ್ತಿರುವುದನ್ನು ಗಮನಿಸಿ, ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಮನೆಯ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ಕೋಣೆಗೆ ಹೋಗಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.