ರವಿನಾಯಕ್ ಬೆಂಗಳೂರು: ಉಡ್ತಾ ಪಂಜಾಬ್ನಂತೆ ಡ್ರಗ್ಸ್ ಕುಖ್ಯಾತಿ ಕರ್ನಾಟಕಕ್ಕೂ ಅಂಟಿಕೊಳ್ಳುವ ದಿನ ದೂರದಲ್ಲಿಲ್ಲ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮಾದಕ ವಸ್ತು ಹಾವಳಿ ನಿಯಂತ್ರಣಕ್ಕೆ ಹಲವು ಕಠಿಣ ಕ್ರಮ ಕೈಗೊಂಡಿರುವ ಹೊರತಾಗಿಯೂ ಶಾಲಾ-ಕಾಲೇಜುಗಳ ಆವರಣ ಹಾಗೂ ಹಾಸ್ಟೆಲ್, ಪಿಜಿಗಳ ಸುತ್ತಮುತ್ತ ಡ್ರಗ್ಸ್ ಮಾರಾಟದ ಜಾಲ ಸದ್ದಿಲ್ಲದೆ ವಿಸ್ತರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿಷ್ಠಿತ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯಗಳಿಂದ ಬಂದು ಹಾಸ್ಟೆಲ್, ಪಿಜಿಗಳಲ್ಲಿರುವ ವಿದ್ಯಾರ್ಥಿಗಳನ್ನು ಪೆಡ್ಲರ್ಗಳು ಗುರಿಯಾಗಿಸಿಕೊಂಡಿರುವುದು ಗಂಭೀರ ವಿಚಾರವಾಗಿದೆ. ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ವ್ಯಸನಕ್ಕೆ ತಳ್ಳುತ್ತಿರುವುದರಿಂದ ನಿಯಂತ್ರಣವೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.
ಕಳೆದ ಮೂರು ವರ್ಷದಲ್ಲಿ 575.83 ಕೋಟಿ ರೂ. ಮೌಲ್ಯದ 19,344 ಕೆ.ಜಿ. ಮಾದಕ ವಸ್ತು ವಶಪಡಿಸಿ ಕೊಳ್ಳಲಾಗಿದೆ. 2024ರಲ್ಲಿ ಎಂಡಿಎಂಎ, ಕೊಕೇನ್, ಎಲ್ಎಸ್ಡಿ, ಗಾಂಜಾ ಸೇರಿ ಅಂದಾಜು 102 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. 2025ರಲ್ಲಿ ಆ ಪ್ರಮಾಣ 147 ಕೋಟಿ
ರೂ.ಗೆ ಏರಿಕೆಯಾಗಿದೆ.ಆದರೆೆ 2026ರಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಆಗಸ್ಟ್ವರೆಗೆ 280.75 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಅಂದರೆ, ಹಿಂದಿನ 2 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತು ಪೂರೈಕೆ ಜಾಲದ ಪ್ರಮುಖ ಗುರಿ ಶೈಕ್ಷಣಿಕ ಸಂಸ್ಥೆ ಹಾಗೂ ಸುತ್ತಲಿನ ಪ್ರದೇಶಗಳಾಗಿವೆ. ಕಾಲೇಜು ಆವರಣಕ್ಕೆ ನೇರವಾಗಿ ಪ್ರವೇಶಿಸುವ ಬದಲು ಹಾಸ್ಟೆಲ್, ಪಿಜಿ, ಕ್ಯಾಂಪಸ್ ಸುತ್ತಲಿನ ಸಣ್ಣ ಅಂಗಡಿಗಳು ಹಾಗೂ ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುವ ಪ್ರದೇಶಗಳನ್ನು ಪೆಡ್ಲರ್ಗಳು ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಮಾದಕ ವಸ್ತು ನೀಡಿ, ಬಳಿಕ ಅವರೇ ಮತ್ತಷ್ಟು ಗ್ರಾಹಕರನ್ನು ಕರೆತರುವಂತೆ ಮಾಡುವ ಜಾಲವೂ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ವಿಜಯನಗರ ವಿಭಾಗದ 6 ಶೈಕ್ಷಣಿಕ ಸಂಸ್ಥೆಗಳು ಹಾಗೂ 2 ಹಾಸ್ಟೆಲ್ಗಳಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ 31 ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಕರ್ನಾಟಕ ಪೊಲೀಸ್ ಇಲಾಖೆಯ ‘ಸನ್ಮಿತ್ರ’ ಯೋಜನೆ ಮಾದಕ ಮುಕ್ತ ಸಮಾಜ ನಿರ್ವಿುಸುವ ಉದ್ದೇಶ ಹೊಂದಿದೆ. ಇದರ ಭಾಗವಾಗಿ ಕಾಲೇಜು ಆಡಳಿತ ಮಂಡಳಿಯ ಅನುಮತಿಯೊಂದಿಗೆ ‘ನಾಕೋಟಿಕ್ಸ್ ಮಾನಿಟರಿಂಗ್’, ಸ್ಕ್ರೀನಿಂಗ್ ಸಿಸ್ಟಮ್ ಮೂಲಕ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗುತ್ತಿದೆ. ಮಾದಕ ವಸ್ತು ಸೇವನೆ ಪತ್ತೆಯಾದ ವಿದ್ಯಾರ್ಥಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು, ಅವರ ಗುರುತನ್ನು ಗೌಪ್ಯವಾಗಿರಿಸಿ ಮಾನಸಿಕ ಆರೋಗ್ಯ ತಜ್ಞರಿಂದ ಕೌನ್ಸೆಲಿಂಗ್, ಅಗತ್ಯವಿದ್ದಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ನೆರವು ನೀಡುವ ಕ್ರಮಕ್ಕೆ ಒತ್ತು ನೀಡಿದ್ದಾರೆ. ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಆಂಟಿ ಡ್ರಗ್ಸ್ ಸಮಿತಿ ರಚಿಸುವ ಕ್ರಮಕ್ಕೂ ಪೊಲೀಸರು ಮುಂದಾಗಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರ ಬೇಡ ಬ್ರೊ ಹಾಗೂ ಆಪರೇಷನ್ ರೈಸ್ ಸೇರಿ ಹಲವು ಜಾಗೃತಿ ಮತ್ತು ನಿಯಂತ್ರಣ ಅಭಿಯಾನ ನಡೆಸುತ್ತಿದೆ. ಪೊಲೀಸ್ ಇಲಾಖೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಉಪನ್ಯಾಸ, ರ್ಯಾಲಿ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಡ್ರಗ್ಸ್ನ ದುಷ್ಪರಿ ಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದೆ.
ಶಾಲಾ-ಕಾಲೇಜು ಆವರಣದ ಸುತ್ತ ಗುಟ್ಖಾ, ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.| ಡಾ. ಆರ್. ಹಿತೇಂದ್ರ ರಾಜ್ಯ ಕಾನೂನು ಸುವ್ಯವಸ್ಥೆ ಮತ್ತು ಮಾದಕ ದ್ರವ್ಯ ನಿಗ್ರಹ ಪಡೆಯ ಹೆಚ್ಚುವರಿ ಎಡಿಜಿಪಿ