ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
- ಚುನಾವಣೆ ಪೂರ್ವ ಕೊಟ್ಟ ಮಾತು ಉಳಿಸಿಕೊಳ್ಳಿ
- ರಾಜಕಾರಣ ‘ಕ್ಯಾಪಿಟಲಿಸ್ಟ್’ ಆಗಬಾರದು
- ಸಮಾಜವಾದ-ಜಾತ್ಯತೀತ ಸಿದ್ದಾಂತಕ್ಕೆ ಬೆಲೆ ಸಿಗಲಿ
- ಅವಕಾಶ ಸಿಗದಿದ್ದರೆ ಗಟ್ಟಿ ಧ್ವನಿಯೊಂದಿಗೆ ಬರುವೆ
ವಿಜಯಪುರ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿರುವ ಸಚಿವ ಸ್ಥಾನದ ಪೈಪೋಟಿಗೆ
ಸಂಬಂಧಿಸಿದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಚ್ಚರಿಯ ಮಾಹಿತಿ ಹೊರಹಾಕಿದ್ದಾರಲ್ಲದೇ ‘ಯಾವ ಒಡಂಬಡಿಕೆ ಮೇರೆಗೆ ಡಿ.ಕೆ. ಶಿವಕುಮಾರ ಸಿಎಂ ಆಗಿದ್ದಾರೋ ಅಂಥದ್ದೇ ಒಡಂಬಡಿಕೆ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಚುನಾವಣೆ ಪೂರ್ವದಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆಯ ಎಲ್ಲ ಸಾರವನ್ನು ಇಲ್ಲಿ ಹೇಳಲು ಹೋಗಲ್ಲ ಎನ್ನುತ್ತಲೇ ಕೆಲವು ವಿಷಯಗಳನ್ನು ಪ್ರಸ್ತಾಪಿಸಿರುವ ಯಶವಂತರಾಯಗೌಡರು, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಚುನಾವಣಾ ಸಮಿತಿ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ನೀಡಿದ ಮಾತು ಉಳಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಿಗೆ ಒಳ್ಳೆಯ ಅವಕಾಶ ಕೊಡುವುದಾಗಿ ಚುನಾವಣೆ ಪೂರ್ವದಲ್ಲಿಯೇ ಮಾತುಕೊಡಲಾಗಿತ್ತು. ಜಿಲ್ಲೆಯ ಇಬ್ಬರು ಶಾಸಕರು ಸಹ ಇದ್ದರು. ಹೀಗಾಗಿ ಅಂಥದ್ದೇ ಒಡಂಬಡಿಕೆಯ ಆಧಾರದ ಮೇಲೆ ಡಿ.ಕೆ. ಶಿವಕುಮಾರ ಅವರಿಗೆ ಅವಕಾಶ ಸಿಕ್ಕಿದ್ದು, ಸಚಿವ ಸ್ಥಾನದ ವಿಚಾರದಲ್ಲಿಯೂ ಆ ಮಾತನ್ನು ಉಳಿಸಿಕೊಳ್ಳುವ ನಿರೀಕ್ಷೆ ಮತ್ತು ವಿಶ್ವಾಸ ನನಗಿದೆ ಎಂದರು.
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಳಿಕ ಅಂದರೆ ಜೂನ್ 18ರ ನಂತರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿಯೇ ಅವಕಾಶ ಸಿಗಬೇಕಿತ್ತು. ಆದರೆ, ಯಾವ ಮಾನದಂಡದ ಆಧಾರದ ಮೇಲೆ ಸಚಿವ ಸ್ಥಾನ ನೀಡಲಾಯಿತೆಂಬುದು ಸದ್ಯಕ್ಕೆ ಗೊತ್ತಿಲ್ಲ. ಮುಂದಿನ ಹಂತದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಹಾಗೂ ಅಧಮ್ಯ ಆತ್ಮವಿಶ್ವಾಸ ಅಡಗಿದೆ ಎಂದರು.
ಸ್ವಾತಂತ್ರಾೃ ನಂತರ ಸಿಕ್ಕಿಲ್ಲ ಸ್ಥಾನ-ಮಾನ
ಕಳೆದ 40 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂರು ಬಾರಿ ಶಾಸಕನಾಗಿ ಪಕ್ಷಕ್ಕೆ ಅಗಾಧ ಕೊಡುಗೆ ನೀಡಿದ್ದು, ಪಕ್ಷವೂ ನನಗೆ ಸಾಕಷ್ಟು ಅವಕಾಶ ನೀಡಿದೆ. ಆದರೆ, ಅವಿಭಜಿತ ವಿಜಯಪುರ ಜಿಲ್ಲೆಯ ರಾಜಕೀಯ ಇತಿಹಾಸ ಗಮನಿಸಿದಾಗ ಇಂಡಿ ವಿಧಾನ ಸಭೆ ಕ್ಷೇತ್ರಕ್ಕೆ ಈವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆ ಕೊರಗು ಇಂದಿಗೂ ಕ್ಷೇತ್ರದ ಜನರನ್ನು ಕಾಡುತ್ತಿದೆ. ಈ ಹಿಂದೆ ಹ್ಯಾಟ್ರಿಕ್ ಸಾಧನೆ ಮೆರೆದ ಆರ್.ಆರ್. ಕಲ್ಲೂರ, ರವಿಕಾಂತ ಪಾಟೀಲರಾದಿಯಾಗಿ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಅವಧಿಯಲ್ಲಾದರೂ ಸಚಿವ ಸ್ಥಾನ ಸಿಗಬಹುದೆಂಬ ಆಶಾಭಾವ ಕ್ಷೇತ್ರದ ಜನರಲ್ಲಿ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಗಮನಿಸಬೇಕು ಎಂದರು.
ಕ್ಯಾಪಿಟಲಿಸ್ಟ್ ಆಗಬಾರದು
ಅಧಿಕಾರ ಮತ್ತು ಆಡಳಿತದ ವಿಚಾರದಲ್ಲಿ ಕ್ಯಾಪಿಟಲಿಸ್ಟ್ ಆಗಬಾರದು. ಸಮಾಜವಾದ-ಜಾತ್ಯತೀತ ನೆಲೆಗಟ್ಟು ಆಧರಿಸಿ ತತ್ವ ಸಿದ್ದಾಂತಕ್ಕೆ ಶ್ರಮಿಸಿದವರಿಗೆ ಅವಕಾಶ ಸಿಗಬೇಕು. ಕಾಂಗ್ರೆಸ್‌ನಲ್ಲಿ ಜಿ.ಪರಮೇಶ್ವರ ಸೇರಿ ಅನೇಕರು ಅವಕಾಶ ವಂಚಿತರಿದ್ದಾರೆ. ಅವಕಾಶ ವಂಚಿತರು ಎಲ್ಲಿಗೆ ಹೋಗಬೇಕು? ಈಗ ಸಿಕ್ಕವರ ಬಗ್ಗೆ ನಾನೇನನ್ನೂ ಹೇಳಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಅವಕಾಶ ಕೊಡಬೇಕು. ಹೊಸಬರಿಗೂ ಅವಕಾಶ ಸಿಗಬೇಕಲ್ಲವೇ? ಈಗಾಗಲೇ ಮಾಡಿದ ನಿಶ್ಚಯಗಳು ಪರಾಮರ್ಶಿಸಬೇಕು ಎಂದು ಯಶವಂತರಾಯಗೌಡರು ಭಾವನಾತ್ಮಕವಾಗಿ ನುಡಿದರು.
ಜಿಲ್ಲೆಯ ಶಾಸಕರ ಬೆಂಬಲದ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಮಿಕವಾಗಿ ಉತ್ತರಿಸಿದ ಶಾಸಕರು, 2013-18 ರ ಅವಧಿಯಲ್ಲಿ ಗಟ್ಟಿಯಾಗಿ ಒಬ್ಬರನ್ನು ಮಂತ್ರಿ ಮಾಡಲು ಶ್ರಮಿಸಿರುವೆ. ನನಗೆ ಸಚಿವ ಸ್ಥಾನದ ಭಾಗ್ಯವೇ ಇಲ್ಲವೆಂದವರ ಪರ ನಿಂತು ಸಚಿವರಾಗಲು ನೆರವಾಗಿದ್ದೇನೆ. ಇನ್ನುಳಿದ ಅವಧಿಯಲ್ಲಿಯೂ ಇಬ್ಬರು ಸಚಿವರಾಗಲು ಸಹಕಾರ ನೀಡಿರುವೆ. ನನ್ನ ವಿಚಾರದಲ್ಲಿ ಅವರು ಹೇಗೆ ನಡೆದುಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು. ನಾನಂತೂ ಜಾತ್ಯತೀಯ ಸಿದ್ದಾಂತಕ್ಕಾಗಿ, ಪಕ್ಷದ ತತ್ವಗಳಿಗಾಗಿ ಶ್ರಮಿಸಿದ್ದೇನೆ. ಸೇವೆಯ ಸಿದ್ದಾಂತ ಅಳವಡಿಸಿಕೊಂಡಿದ್ದೇನೆ, ಕೇವಲ ಲಿಂಗಾಯತ ನಾಯಕ ಎನ್ನಿಸಿಕೊಳ್ಳದೇ ಸರ್ವ ಸಮುದಾಯಗಳ ಪರ ನಿಂತಿದ್ದೇನೆ. ಎಲ್ಲರಿಗೂ ಅವಕಾಶ ಸಿಕ್ಕ ಬಳಿಕವೇ ನನ್ನ ಅವಕಾಶ ಕೇಳುತ್ತಿದ್ದೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲ ಸಹಾಯ ಮಾಡಿದ್ದೇನೆ. ಉಳಿದವರು ಸಹಾಯ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದರು.
ಹಾಗೊಂದು ವೇಳೆ ಸಿಗದೇ ಹೋದರೆ ತಮ್ಮ ನಿಲುವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ‘ಹಾಗೊಂದು ವೇಳೆ ಸಿಗದೇ ಹೋದರೆ ಗಟ್ಟಿ ಧ್ವನಿಯಿಂದ ಹಿಂತಿರುಗುವುದಾಗಿ’ ಮಾರ್ಮಿಕವಾಗಿ ನುಡಿದರು.