ವಿಜಯಪುರ: ಕೊಲೆ, ಸುಲಿಗೆ, ದರೋಡೆ ಕೃತ್ಯಗಳಿಂದಲೇ ಕುಖ್ಯಾತಿ ಪಡೆದಿರುವ ಭೀಮಾತೀರದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದ್ದು, ಶುಕ್ರವಾರ(ಮೇ 29) ವಿವಾದಿತ ಜಮೀನಿಗಾಗಿ ಒಂದೇ ಕುಟುಂಬದ ಆರು ಜನರನ್ನು ಮಾರಾಕಾಸ್ತ್ರದಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಕರ್ನಾಟಕ-ಮಹಾರಾಷ್ಟ್ರದ ಗಡಿರೇಖೆಯಾಗಿ ಹರಿಯುವ ಭೀಮಾನದಿ ಪಾತ್ರದಲ್ಲಿರುವ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಹಾಗೂ ಜೊತೆಗಿದ್ದ ಇಬ್ಬರು ಅಮಾನುಷವಾಗಿ ಹತ್ಯೆಗೀಡಾಗಿದ್ದಾರೆ. ಘಟನೆಯಿಂದ ಭೀಮಾತೀರದಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಮೃತರನ್ನು ಚಡಚಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದು ನಿರಾಳೆ(58), ದುಂಡಪ್ಪ ನಿರಾಳೆ 65), ಶಿವಪುತ್ರ ನಿರಾಳೆ(60), ರಾಹುಲ್ ನಿರಾಳೆ(28), ಸಮರ್ಥ ನಿರಾಳೆ(27) ಹಾಗೂ ಶಬ್ಬೀರ ನದಾಫ್(45) ಎಂದು ಗುರುತಿಸಲಾಗಿದೆ. ಜಮೀನು ವಿವಾದವೇ ಘಟನೆಗೆ ಕಾರಣ ಎನ್ನಲಾಗಿದೆ.
ಮೂಲತಃ ಚಡಚಣ ನಿವಾಸಿಗಳಾಗಿರುವ ನಿರಾಳ ಕುಟುಂಬ ತೇಲಿ ಎಂಬುವರಿಂದ ಗೋವಿಂದಪುರದಲ್ಲಿ 25 ಎಕರೆ ಜಮೀನು ಖರೀದಿಸಿದ್ದರು. ಶುಕ್ರವಾರ ಜಮೀನಿಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ತಂಡವೊಂದು ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬು ಕತ್ತರಿಸುವ ಹರಿತ ಆಯುಧದಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ.
ಘಟನೆ ಹಿನ್ನೆಲೆ
ಚಡಚಣ ತಾಲೂಕಿನ ನಿವರಗಿ ಗ್ರಾಮದ ತೇಲಿ ಎಂಬುವರಿಂದ ನಿರಾಳೆ ಕುಟುಂಬ ಗೋವಿಂದಪುರದ 25 ಎಕರೆ ಜಮೀನು ಖರೀದಿಸಿತ್ತು. ಕಳೆದ 15-16 ವರ್ಷ ಪಾಳು ಬಿದ್ದಿದ್ದ ಈ ಜಮೀನಿನ ಕುರಿತು ವಿವಾದಗಳಿದ್ದವು. ಇತ್ತೀಚೆಗಷ್ಟೇ ನಿರಾಳೆ ಕುಟುಂಬ ಈ ಜಮೀನು ಖರೀದಿಸಿತ್ತು. ಶುಕ್ರವಾರ ಜಮೀನಿಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆದಿದೆ. ಘಟನೆಗೆ ಗೋವಿಂದಪುರದಲ್ಲಿ ವಿವಾದದ ಭಾಗವಾಗಿರುವ ಕುಟುಂಬವೊಂದರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಆದರೆ, ಈವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ನಡೆದಿರುವ ಬಗ್ಗೆಯೂ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಕೇವಲ ಹರಿತವಾದ ಆಯುಧ ಬಳಸಿರುವುದು ಕಂಡು ಬಂದಿದ್ದು, ತನಿಖೆ ಪ್ರಗತಿಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ಗುಂಡಿನ ದಾಳಿಯ ಕುರಿತು ಖಚಿತವಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ತನಿಖೆ ಪ್ರಗತಿಯಲ್ಲಿದೆ.