ವಿಭೂತಿಪುರ ಮಠದ ವಾರ್ಷಿಕ ಸುವರ್ಣಶ್ರೀ ಪ್ರಶಸ್ತಿ ಮತ್ತು ಜಾನಪದ ವಿಭೂತಿ ಪ್ರಶಸ್ತಿಗೆ ಭಾಜನರಾಗಿರುವ ಪದ್ಮಶ್ರೀ ಸುಶೀಲಮ್ಮ ಮತ್ತು ಜೋಗತಿ ಕಲಾವಿದ ಸಿದ್ದಪ್ಪ ಗುರುಪಾದಪ್ಪ ಆಲಗೊಂಡ  
ರಾಜ್ಯ

ವಿಭೂತಿಪುರ ಮಠದ ವಾರ್ಷಿಕ ಪ್ರಶಸ್ತಿ ಪ್ರಕಟ

ಪದ್ಮಶ್ರೀ ಸುಶೀಲಮ್ಮ ಸೇರಿ ನಾಲ್ವರು ಸಾಧಕರಿಗೆ ಗೌರವ

ಬೆಂಗಳೂರು : ವಿಭೂತಿಪುರ ಮಠದಿಂದ ಪ್ರತಿವರ್ಷ ಕೊಡಮಾಡುವ ವಾರ್ಷಿಕ ಸುವರ್ಣಶ್ರೀ ಮತ್ತು ಇನ್ನಿತರೆ ಮೂರು ಪ್ರಶಸ್ತಿ ಪ್ರಕಟವಾಗಿದ್ದು, ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಪದ್ಮಶ್ರೀ ಪುರಸ್ಕೃತೆ ಡಾ.ಎಸ್.ಜಿ.ಸುಶೀಲಮ್ಮ ಸುವರ್ಣಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ 5 ದಶಕಗಳ ಸುದೀರ್ಘ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸುಶೀಲಮ್ಮ ಅವರನ್ನು ಸುವರ್ಣಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 2026ರ ಜಾನಪದ ವಿಭೂತಿ ಪ್ರಶಸ್ತಿಗೆ ಚೌಡಿಕೆ ಪದಗಳ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಜೋಗತಿ ಕಲಾವಿದ ಸಿದ್ದಪ್ಪ ಗುರುಪಾದಪ್ಪ ಆಲಗೊಂಡ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಜಾದೂ ಕಲಾ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ್, ಜಾನಪದ ಜಂಗಮ ಪ್ರಶಸ್ತಿಗೆ ರಂಗಭೂಮಿ ಕಲಾವಿದ ಜಗದೀಶ್ ಜಾಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಜಾದೂ ಕಲಾ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ್, ಜಾನಪದ ಜಂಗಮ ಪ್ರಶಸ್ತಿಗೆ ಆಯ್ಕೆಯಾಗಿರುವ ರಂಗಭೂಮಿ ಕಲಾವಿದ ಜಗದೀಶ್ ಜಾಲಾ

ಸುವರ್ಣಶ್ರೀ ಪ್ರಶಸ್ತಿಯು 50 ಸಾವಿರ ರೂ. ನಗದು, ಕಂಚಿನ ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇನ್ನುಳಿದ ಮೂರು ಪ್ರಶಸ್ತಿಗಳು 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಮುಂಬರುವ ಡಿ.3 ರಿಂದ 5ರವರೆಗೆ ನಡೆಯುವ ಶ್ರೀಮಠದ ಶ್ರೀವೀರಭದ್ರೇಶ್ವರ ವಾರ್ಷಿಕ ಜಾತ್ರೆ ಮತ್ತು ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.