ಚನ್ನರಾಯಪಟ್ಟಣ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಒಳನಾಡು ಶ್ರೀ ಅನ್ನಪೂಣೇಶ್ವರಿ ದೇವಿ ರಥವನ್ನು ಭಕ್ತರು ಎಳೆದರು. 
ರಾಜ್ಯ

ವಿಜೃಂಭಣೆಯ ಒಳನಾಡು ಅನ್ನಪೂಣೇಶ್ವರಿ ದೇವಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಲ್ಲೇನಹಳ್ಳಿಯಲ್ಲಿ ಒಳನಾಡು ಅನ್ನಪೂಣೇಶ್ವರಿ ದೇವಿಯ ಮಹಾ ರಥೋತ್ಸವ
  • ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು

ಚನ್ನರಾಯಪಟ್ಟಣ:

ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಒಳನಾಡು ಅನ್ನಪೂಣೇಶ್ವರಿ ದೇವಿಯ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ನಿಸರ್ಗ ರಮಣೀಯ ತಾಣದಲ್ಲಿ ಅನ್ನಪೂರ್ಣೇಶ್ವರಿ ದೇವಾಲಯವಿದ್ದು, ರಥೋತ್ಸವದ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ದೇವಾಲಯದಲ್ಲಿ ಮಂಗಳವಾದ್ಯ ಸಹಿತವಾಗಿ ಸುಪ್ರಭಾತ, ಮಹಾಭಿಷೇಕ, ರಥಸಂಪ್ರೋಕ್ಷಣೆ, ಪರಿವಾರ ದೇವತೆಗಳ ಸಮೇತ ಅನ್ನಪೂರ್ಣೇಶ್ವರಿ ಮೂಲಮಂತ್ರ ಹೋಮ, ಪೂರ್ಣಾಹುತಿ, ಸುಹಾಸಿನಿಯರಿಂದ ಸಹಸ್ರನಾಮ ಪಾರಾಯಣ ಆರ್ಚನೆಯೊಂದಿಗೆ ಜಾತ್ರಾ ಮಹೋತ್ಸಕ್ಕೆ ಚಲನೆ ದೊರೆಯಿತು. ಬಳಿಕ ಅಮ್ಮನವರನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಅಡ್ಡೆ ಉತ್ಸವ ಮಾಡಿ ತರಲಾಯಿತು. ನಂತರ ಅಲಂಕೃತ ರಥದಲ್ಲಿ ಸ್ಥಾಪಿಸಿ ಮಹಾಮಂಗಳಾರತಿ ಬಳಿಕ ಭಕ್ತರು ರಥವನ್ನು ಎಳೆದು ಪುನೀತರಾದರು.
ದೇವರಿಗೆ ಫಲ, ಪುಷ್ಪಾದಿ ಅರ್ಚನೆ ಮಾಡುವ ಜತೆಗೆ ಬಾಳೆಹಣ್ಣು, ಹೂವನ್ನು ಮಹಾ ರಥಕ್ಕೆ ಎರಚಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಕೆಲವು ಭಕ್ತರು ಹರಕೆ ತೀರಿಸಿದರು. ಮಂಗಳವಾದ್ಯ, ಚಾಮನಕುಣಿತ ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು. ಪ್ರಧಾನ ಅಚಕರಾದ ಎಸ್.ಸುದರ್ಶನಶರ್ಮ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ, ಮಂಗಳ ದ್ರವ್ಯ ವಿತರಿಸಿದರು.
ಪ್ರತಿ ವರ್ಷ ಆಷಾಢ ಮಾಸದ ಕಡೇ ಶುಕ್ರವಾರ ಅಭಿಜಿನ್ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನೆರವೇರಲಿದೆ. ವಾರ್ಷಿಕ ಆಚರಣೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಪ್ರಾರ್ಥನೆ ಮಾಡಿ ರಥ ಎಳೆದು ಭಕ್ತಿ ಸಮರ್ಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಹೊನ್ನಮಾರನಹಳ್ಳಿ ಶನೈಶ್ಚರ ದೇವಸ್ಥಾನದ ಮುಖ್ಯಸ್ಥ ಕುಮಾರಸ್ವಾಮಿ, ಹೊಸಕೊಪ್ಪಲು ಶಕ್ತಿ ಪೀಠದ ಬಸವ ಚೈತನ್ಯ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ತಿತರಿದ್ದರು.
ಒಳನಾಡು ಅನ್ನಪೂರ್ಣೇಶ್ವರಿ ಬೇಡಿದ್ದನ್ನು ಕರುಣಿಸೋ ಮಹಾತಾಯಿ. ಹೀಗಾಗಿ ವರ್ಷಪೂರ್ತಿ ಭಕ್ತರ ದಂಡೇ ದೇಗುಲಕ್ಕೆ ಹರಿದು ಬರುತ್ತದೆ. ಅದರಲ್ಲೂ ವರ್ಷಕ್ಕೊಮ್ಮೆ ನಡೆಯುವ ಮಹಾ ರಥೋತ್ಸವವನ್ನು ನೋಡುವುದೇ ಚೆಂದ. ಮನದ ತುಂಬೆಲ್ಲ ಜಗನ್ಮಾತೆಯ ಧ್ಯಾನ, ಹೆಜ್ಜೆ ಹೆಜ್ಜೆಗೂ ಭಕ್ತಿಯ ಪುಳಕ, ಗಂಟೆನಾದದೊಮದಿಗೆ ಸ್ವರಗಳ ನಾದ, ಸರ್ವಾಲಂಕಾರಗಳಿಂದ ಅಮ್ಮನ ತೇರು ರೋಮಾಂಚನಗೊಳಿಸಿತು.
ಎಸ್.ಸುದರ್ಶನ ಶರ್ಮ ಪ್ರಧಾನ ಅರ್ಚಕರು, ಒಳನಾಡು ಅನ್ನಪೂರ್ಣೇಶ್ವರಿ ದೇವಾಲಯ