ಅರಸೀಕೆರೆ ನಗರದ ವಾಚನಾಲಯ ರಸ್ತೆಗೆ ಹೊಂದಿಕೊಂಡಂತಿರುವ ಆಂಜನೇಯ ಸ್ವಾಮಿ ಪ್ರವೇಶದ್ವಾರದ ಹೊರನೋಟ.
- ಪ್ರಾಚೀನ ಆಂಜನೇಯಸ್ವಾಮಿ ದೇಗುಲ
- ಮೂರು, ಐದು, ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷ
ಅರಸೀಕೆರೆ: ಸಂಕಷ್ಟಗಳನ್ನು ಹೊತ್ತು ಬರುವ ಆಸ್ತಿಕರ ಪಾಲಿಗೆ ಪ್ರಾಚೀನ ಆಂಜನೇಯಸ್ವಾಮಿ ದೇಗುಲ ನೆಮ್ಮದಿ ನೀಡುವ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ನಗರದ ವಾಚನಾಲಯ ರಸ್ತೆಗೆ ಹೊಂದಿಕೊಂಡಂತಿರುವ ಪ್ರಾಚೀನ ಆಂಜನೇಯ ಸ್ವಾಮಿ ದೇಗುಲ ಭಕ್ತರ ಭಕ್ತಿಯ ತಾಣವಾಗಿದೆ. ಸ್ಥಳೀಯರ ಸಹಕಾರ ಪಡೆದು ನಿರ್ಮಾಣಗೊಂಡಿರುವ ದೇಗುಲಕ್ಕೆ ಹೊಸ ಸ್ಪರ್ಶ ನೀಡಲಾಗಿದೆ. ನಿತ್ಯ ಮುಂಜಾನೆ ಹಾಗೂ ಸಂಜೆ ಪೂಜಾ ಕಾರ್ಯ ನಿತ್ಯ ನಿರಂತರವಾಗಿ ನಡೆಯುತ್ತದೆ. ಪುರಾತನ ದೇಗುಲದ ಗರ್ಭಗುಡಿಯಲ್ಲಿರುವ ಆಂಜನೇಯನ ಸ್ವಾಮಿ ವಿಗ್ರಹ ಪಶ್ಚಿಮಾಭಿಮುಖವಾಗಿದ್ದು, ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುವಂತಿದೆ.
ದೇಗುಲಕ್ಕೆ ಹೊಂದಿಕೊಂಡಂತೆ ನವಗ್ರಹ ಪ್ರತಿಷ್ಠಾಪನಾ ಪ್ರಾಂಗಣವಿದೆ. ಹನುಮನ ದರ್ಶನ ಪಡೆದ ಬಳಿಕ ಭಕ್ತರು ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿ ಕಷ್ಟ ನಿವಾರಣೆಗೆ ಪ್ರಾರ್ಥಿಸುವ ಸಂಪ್ರದಾಯವಿದೆ. ನವಗ್ರಹದ ಸುತ್ತಲೂ ಹಾಕಲಾಗಿರುವ ಚಿಕ್ಕ ಚಿಕ್ಕ ಕಲ್ಲುಗಳ ಮೇಲೆ ಪ್ರದಕ್ಷಿಣೆ ಹಾಕಿದರೆ ದೈಹಿಕ ಆಯಾಸ ಕಡಿಮೆಯಾಗುತ್ತದೆ. ಅಲ್ಲದೆ ಮಾನಸಿಕ ಒತ್ತಡ ನಿವಾರಣೆಗೆ ದಿವ್ಯೌಷಧವಾಗಿದೆ. ಪಾದ ನೋವು, ರಕ್ತ ಸಂಚಾರ ಸುಗಮವಾಗಿ ರೋಗ ಬಾಧೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಬಲವಾಗಿದ್ದು, ಮೂರು, ಐದು, ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ. ಜತೆಗೆ ಉದ್ಯೋಗ, ವಿದ್ಯೆ, ರಾಜಕೀಯ ಏಳಿಗೆ, ಆರೋಗ್ಯ, ಆರ್ಥಿಕ ಸಂಕಷ್ಟ, ಪೀಡೆ ಕಾಟ ಸಮಸ್ಯೆ ಪರಿಹಾರ ಸೇರಿ ಎಲ್ಲ ಬಗೆಯ ಸಂಕಷ್ಟಗಳಿಗೆ ವಾಯುಪುತ್ರನ ದರ್ಶನ ಪಡೆದರೆ ಪರಿಹಾರ ದೊರೆಯುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಬಲವಾಗಿದೆ. ಆದ್ದರಿಂದಲೇ ಪ್ರತಿ ಶನಿವಾರ ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಇಷ್ಟಾರ್ಥ ಈಡೇರಿದ ಬಳಿಕ ಹರಕೆ ತೀರಿಸುವ ಪರಿಪಾಠ ಇಂದಿಗೂ ಮುಂದುವರಿದಿದೆ.
ದೇವಾಲಯದ ಇತಿಹಾಸ: ಸಣ್ಣ ಪಟ್ಟಣಕ್ಕೆ ಆಗಾಗ ಬಂದೊದಗುತ್ತಿದ್ದ ಸಂಕಷ್ಟ ನಿವಾರಣೆ ಸವಾಲಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಕರು ರಾಮನ ಭಂಟ ಹನುಮನನ್ನು ಆರಾಧಿಸಿದರೆ ಎಲ್ಲ ಬವಣೆ ದೂರಾಗಲಿವೆ ಎಂಬುದನ್ನು ಶಾಸ್ತ್ರಗಳಿಂದ ತಿಳಿದು ಅಂಜನೀ ಪುತ್ರನನ್ನು ಮೊದಲಿಗೆ ಪ್ರತಿಷ್ಠಾಪನೆ ಮಾಡಿದ್ದರಂತೆ. ಆದ್ದರಿಂದಲೇ ಪ್ರಾಚೀನ ಆಂಜನೇಯ ಸ್ವಾಮಿ ದೇಗುಲವೆಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು.
ಹನುಮನ ದರ್ಶನಕ್ಕೆ ಭಕ್ತರ ಸಾಲು: ದೇಗುಲದ ಆವರಣದಲ್ಲಿ ಪ್ರತಿ ವರ್ಷ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬೆಣ್ಣೆ, ತುಳಸಿ, ನಾಣ್ಯದ ಅಲಂಕಾರ ಕಣ್ಮನ ಸೆಳೆಯುವಂತಿರುತ್ತದೆ. ಪ್ರತಿ ಶನಿವಾರ ಭಕ್ತರ ದಂಡೇ ಸನ್ನಿಧಿಗೆ ಹರಿದು ಬರುತ್ತಿದೆ. ಹೂ,ಹಣ್ಣು, ಎಳ್ಳಿನ ಗಂಟು ಮಾರುವವರಿಗೆ ದೇಗುಲ ಬದುಕು ಕಟ್ಟಿಕೊಟ್ಟಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಇಷ್ಟಾರ್ಥಗಳ ಸಿದ್ಧಿಗೆ ಹರಕೆ ಹೊತ್ತವರು ವಿಶೇಷವಾಗಿ ಶನಿವಾರ ಸೇರಿದಂತೆ ಬಿಡಿ ದಿನಗಳಲ್ಲಿ ಆಗಮಿಸಿ ಪೂಜೆ ಸಲ್ಲಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವವರ ಸಂಖ್ಯೆಗೂ ಲೆಕ್ಕವಿಲ್ಲ. ಕುಂಕುಮಾರ್ಚನೆ, ಕಾಕಡಾರತಿ, ಮಹಾಮಂಗಳಾರತಿ ಸೇವೆ ಇಲ್ಲಿನ ವಿಶೇಷ. ಜತೆಗೆ ಗುರುಪೂರ್ಣಿಮೆ ನಡೆಯುವ ತಿಂಗಳಿನಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಹನುಮನ ದರ್ಶನ ಪಡೆಯಲಿದ್ದಾರೆ. ದೇಗುಲದ ಪ್ರವೇಶದ್ವಾರದಲ್ಲಿ ಬೃಹತ್ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಕೆತ್ತಲಾಗಿದ್ದು ಆಕರ್ಷಣೆಯ ತಾಣವಾಗಿದೆ. ಎಕ್ಕದ ಗಿಡ, ಬನ್ನಿ, ಬಿಲ್ವಪತ್ರ ಸೇರಿದಂತೆ ಪೂಜಾ ಕಾರ್ಯಕ್ಕೆ ಬಳಸುವ ಪತ್ರೆಗಳ ಗಿಡ, ಮರಗಳಿದ್ದು ಭಕ್ತರು ನಮಿಸಿ ಮುಂದೆ ಸಾಗುವ ಪದ್ಧತಿಯಿದೆ.
ತೆರಳುವ ಮಾರ್ಗ: ಪ್ರಾಚೀನ ಆಂಜನೇಯ ಸ್ವಾಮಿ ಸನ್ನಿಧಿ ನಗರ ಬಸ್ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿದೆ. ಕಾಲ್ನಡಿಗೆಯಲ್ಲಿ ಕೆಲವೇ ನಿಮಿಷಗಳಲ್ಲಿ ನಡೆದುಕೊಂಡೇ ದೇಗುಲ ತಲುಪಬಹುದಾಗಿದೆ. ದೂರದ ಊರುಗಳಿಂದ ವಾಹನಗಳಲ್ಲಿ ಆಗಮಿಸುವವರು ರಾಷ್ಟ್ರೀಯ ಹೆದ್ದಾರಿ, ವಾಚನಾಲಯ ಶ್ಯಾನುಭೋಗರ ಬೀದಿ, ರಂಗೇಗೌಡ ರಸ್ತೆ ಮೂಲಕವೂ ಬರಬಹುದು. ಆಟೋ, ಬೈಕ್, ಕಾರು ಸೇರಿದಂತೆ ವಾಹನಗಳಲ್ಲಿ ಬರಲು ಯಾವುದೇ ಅಡ್ಡಿಯಿಲ್ಲ.
ಇಲ್ಲಿನ ಹನುಮ ದೇಗುಲವನ್ನು ಭಕ್ತರು ಶತಮಾನಗಳ ಹಿಂದೆ ಕಟ್ಟಿದ್ದರು ಎನ್ನುವ ಕಾರಣದಿಂದಾಗಿ ಪ್ರಾಚೀನ ಆಂಜನೇಯ ಸ್ವಾಮಿ ಎನ್ನುವ ಹೆಸರು ಚಾಲ್ತಿಯಲ್ಲಿದೆ. ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಆದ್ದರಿಂದಲೇ ಶನಿವಾರ ಸೇರಿದಂತೆ ಬಿಡಿ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದರ್ಶನ ಪಡೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಕೊಳ್ಳುತ್ತಿದ್ದಾರೆ. ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ದೇವಾಲಯದ ಪ್ರಗತಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದು ನೆಚ್ಚಿನ ಆಧ್ಯಾತ್ಮಿಕ ತಾಣವಾಗಿ ಗುರುತಿಸಿಕೊಂಡಿದೆ.
ಸುಬ್ರಮಣ್ಯ ಬಾಬು ಸ್ಥಳೀಯ ಯೋಜನಾ ಪ್ರಾಧಿಕಾರದ ನಿದೇರ್ಶಕ
ಸಂಕಷ್ಟಗಳನ್ನು ಹೊತ್ತು ಬರುವ ಆಸ್ತಿಕರ ಪಾಲಿಗೆ ಪ್ರಾಚೀನ ಆಂಜನೇಯಸ್ವಾಮಿ ದೇಗುಲ ನೆಮ್ಮದಿ ನೀಡುವ ಕ್ಷೇತ್ರವಾಗಿದ್ದು, ಪ್ರತಿ ಶನಿವಾರ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆಯತ್ತಿದ್ದಾರೆ. ದೇಗುಲ ಆವರಣದಲ್ಲಿ ಪ್ರತಿ ವರ್ಷ ಜರುಗುವ ಹನುಮ ಜಯಂತಿಗೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವವರ ಸಂಖ್ಯೆಗೂ ಲೆಕ್ಕವಿಲ್ಲ. ಕುಂಕುಮಾರ್ಚನೆ, ಕಾಕಡಾರತಿ, ಮಹಾಮಂಗಳಾರತಿ ಸೇವೆ ಇಲ್ಲಿನ ವಿಶೇಷ. ಗುರುಪೂರ್ಣಿಮೆ ನಡೆಯುವ ತಿಂಗಳಿನಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಪ್ರಾಚೀನ ಆಂಜನೇಯಸ್ವಾಮಿ ಕಣ್ತುಂಬಿಕೊಳ್ಳುವ ಪರಿಪಾಠವಿದೆ. ವಿಶೇಷ ದಿಗಳಲ್ಲಿ ಅನ್ನಸಂತರ್ಪಣೆ ಮೂಲಕ ಸೇವೆ ಸಲ್ಲಿಸುವ ಪರಿಪಾಠ ಬೆಳೆದು ಬಂದಿದೆ.