ವಿಜಯಪುರದ ಕಂದಗಲ್ಲ ಹನುಮತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮವನ್ನು ಡಾ. ಆನಂದ ಕೆ. ಉದ್ಘಾಟಿಸಿದರು. ಕೆ.ಕೆ. ಚವಾಣ್, ನಿರ್ಮಲಾ ಸುರಪುರ, ದೀಪಾಕ್ಷಿ ಜಾನಕಿ, ಹರೀಶ ಕೆ.ಆರ್. ಮತ್ತಿತರರಿದ್ದಾರೆ.
- ಜಿಲ್ಲಾಧಿಕಾರಿ ಅಭಿಮತ
- ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟನೆ
ವಿಜಯಪುರ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಯೋಗದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಗುರುವಾರ ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳ ಬುನಾದಿ ಬಾಲ್ಯಾವಸ್ಥೆಯಲ್ಲೇ ನಿರ್ಮಾಣವಾಗುತ್ತದೆ. ಹೀಗಾಗಿ, ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರಲ್ಲದೇ, ಇನ್ನೊಂದೆಡೆ ಸರ್ಕಾರ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅಂಗನವಾಡಿ ಶಿಕ್ಷಕಿಯರು ಅಂಗನವಾಡಿ ಕೇಂದ್ರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮ ಮತ್ತು ಸಮುದಾಯ ಮಟ್ಟದಲ್ಲಿಯೂ ಜನರಿಗೆ ಈ ಯೋಜನೆಗಳ ಮಾಹಿತಿ ತಲುಪಿಸುವ ಮೂಲಕ ಅವುಗಳ ಸದುಪಯೋಗ ಪಡೆಯಲು ಪ್ರೇರಣೆ ನೀಡಬೇಕೆಂದು ತಿಳಿಸಿದರು.
ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಶಿಕ್ಷಣ ಚಟುವಟಿಕೆಗಳು ಹಾಗೂ ಆರೋಗ್ಯ ಸಂಬಂಧಿತ ವಿವಿಧ ತರಬೇತಿ ಅಧಿವೇಶನಗಳನ್ನು ನಡೆಸಲಾಯಿತು. ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕ್ಷೇತ್ರಮಟ್ಟದ ಅನುಭವ ಗಳನ್ನೂ ಹಂಚಿಕೊಳ್ಳಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವಾಣ್, ಕಾರ್ಯಕ್ರಮಾಧಿಕಾರಿ ನಿರ್ಮಲಾ ಸುರಪುರ, ದೀಪಾಕ್ಷಿ ಜಾನಕಿ, ಅಜೀಂ ಪ್ರೇಮ್ ಜೀ ಫೌಂಡೇಶನ್ ಜಿಲ್ಲಾ ಸಂಯೋಜಕ ಹರೀಶ ಕೆ.ಆರ್. ಮತ್ತಿತರರಿದ್ದರು.