Fire Breaks 
ರಾಜ್ಯ

ಅಕ್ರಮ ಬಾಂಗ್ಲಾ ವಲಸಿಗರ ಸ್ಕ್ರಾಪ್ ಯಾರ್ಡ್‌ಗೆ ಬೆಂಕಿ: ಸುಟ್ಟು ಕರಕಲಾದ 5 ಎಕರೆ ಪ್ರದೇಶ! | Fire Breaks

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಿಂಗೀಪುರದಲ್ಲಿ ಗುರುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. 
ಅಕ್ರಮ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್‌ಗಳ ಬಳಿ ಸಂಗ್ರಹಿಸಿಡಲಾಗಿದ್ದ ಟನ್‌ಗಟ್ಟಲೆ ಸ್ಕ್ರಾಪ್‌ (ಗುಜರಿ) ಬೆಂಕಿಗಾಹುತಿಯಾಗಿದೆ. ಸುಮಾರು ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿದ್ದ ಸ್ಕ್ರಾಪ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಆಕಾಶದ ಎತ್ತರಕ್ಕೆ ಹೊಗೆ ಆವರಿಸಿ ಆತಂಕ ಸೃಷ್ಟಿಸಿತ್ತು.

ಕ್ಷಣಾರ್ಧದಲ್ಲಿ ವ್ಯಾಪಿಸಿದ ಜ್ವಾಲೆ

ಸಂಜೆ ಆರು ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಬೆಂಕಿ, ಸ್ಕ್ರಾಪ್‌ನಲ್ಲಿ ಪ್ಲಾಸ್ಟಿಕ್ ಸೇರಿದಂತೆ ದಹನಕಾರಿ ವಸ್ತುಗಳಿದ್ದ ಕಾರಣ ಕ್ಷಣಾರ್ಧದಲ್ಲಿ ಐದು ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಕಳೆದ ಹಲವಾರು ವರ್ಷಗಳಿಂದ ಈ ಸ್ಥಳದಲ್ಲಿ ಬಾಂಗ್ಲಾದೇಶದ ಮೂಲದ ವಲಸಿಗರು ನೆಲೆಸಿದ್ದು, ಇಲ್ಲಿ ಸ್ಕ್ರಾಪ್ ಸಂಗ್ರಹಣೆ ಮಾಡಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ವಲಸಿಗರು ಶೆಡ್‌ಗಳನ್ನು ಖಾಲಿ ಮಾಡಿದ್ದರು ಎನ್ನಲಾಗಿದ್ದು, ಈ ನಡುವೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಎಲೆಕ್ಟ್ರಾನಿಕ್ ಸಿಟಿಯ ಅಗ್ನಿಶಾಮಕ ಠಾಣೆಯಿಂದ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಬೇಗೂರಿನಲ್ಲಿಯೂ ಇಂತಹುದೇ ಘಟನೆ ಸಂಭವಿಸಿದ್ದು, ಇದೀಗ ಬಿಂಗೀಪುರದಲ್ಲಿ ಮರುಕಳಿಸಿರುವುದು ಸಂಶಯಕ್ಕೆ ಕಾರಣವಾಗಿದೆ.