- ಹಿಂದಿನ ಆದೇಶಕ್ಕೆ ಸಹಮತ ತೋರದ ಹೈಕೋರ್ಟ್
- ವಿಸ್ಕೃತ ಪೀಠಕ್ಕೆ ವಿಚಾರಣೆ ವರ್ಗಾವಣೆ
ಬೆಂಗಳೂರು: ಹಣ ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಂಗಳೂರಿನ ಸಂತೋಷ್ ಮತ್ತು ಜಯರಾಜ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಂದರ್ ಬಾಹರ್ ಇಸ್ಪೀಟ್ ಆಟದ ಸ್ವರೂಪದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಅಂದರ್ ಬಾಹರ್ ಒಂದು ಕೌಶಲ್ಯದ ಆಟ ಎಂದು 1977ರಲ್ಲಿ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ನೀಡಿದ ತೀರ್ಪನ್ನು ಇತರ ಪ್ರಕರಣಗಳಿಗೆ ಅನ್ವಯಿಸುವ ಬಗ್ಗೆ ಸಹಮತ ತೋರದ ನ್ಯಾಯಪೀಠ, ಈ ಆಟವು ಕೌಶಲ್ಯದ ಆಟವೇ ಅಥವಾ ಅದೃಷ್ಟದ ಆಟವೇ ಎಂಬ ವಿಷಯವನ್ನು ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಇಸ್ಪೀಟ್ ಕಾರ್ಡ್ಗಳನ್ನು ಷಲ್ ಮಾಡಿ ಆಟ ಆರಂಭಿಸಿದ ಬಳಿಕ ಯಾವ ಕಾರ್ಡ್ ಹೊರಬರುತ್ತದೆ ಎಂಬುದನ್ನು ಆಡಗಾರ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಿರುವಾಗ ಅದನ್ನು ಕೌಶಲ್ಯದ ಆಟ ಎಂದು ಹೇಗೆ ಕರೆಯಲು ಸಾಧ್ಯ? ಈ ಆಟದಲ್ಲಿ ಕೌಶಲ್ಯದ ಪಾತ್ರವೇ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
1977ರ ಇ. ಈರಣ್ಣ ವಸರ್ಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಅಂದರ್ ಬಾಹರ್ ಆಟವನ್ನು ಅದೃಷ್ಟದ ಆಟ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿಲ್ಲ ಎಂದು ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಆ ತೀರ್ಪಿನ ಆಧಾರದಲ್ಲಿ ನಂತರದ ದಿನಗಳಲ್ಲಿ ಅಂದರ್ ಬಾಹರ್ ಆಟವನ್ನು ಕೌಶಲ್ಯದ ವಾದ ಎಂದು ವಾದಿಸಲಾಗುತ್ತಿದೆ.
ಆ ತೀರ್ಪನ್ನು ಪ್ರಕರಣದ ಸಾಕ್ಷ್ಯಾಧಾರಗಳ ಆಧಾರದಲ್ಲಿ ನೀಡಲಾಗಿತ್ತು. ಹಾಗಾಗಿ ಆ ತೀರ್ಪನ್ನು ಆಧರಿಸಿ ಅಂದರ್ ಬಾಹರ್ ಆಟವು ಎಲ್ಲ ಸಂದರ್ಭಗಳಲ್ಲಿಯೂ ಕೌಶಲ್ಯದ ಆಟ ಎಂದು ಹೇಳುವುದು ಸರಿಯಲ್ಲ ಎಂಬುದು ನ್ಯಾಯಪೀಠದ ಅಭಿಪ್ರಾಯವಾಗಿದೆ. ಇಂತಹ ಆಟಗಳಿಂದ ಅನೇಕ ಕುಟುಂಬಗಳು ಹಾಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ.