ಕೆಂಭಾವಿ ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯ ಸುರಪುರ&ಹುನಗುಂದ ರಾಜ್ಯ ಹೆದ್ದಾರಿ ಸೇತುವೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿದ್ದು ಸೇತುವೆ ಮೇಲೆ ಸಿಸಿ ರಸ್ತೆ ನಿರ್ಮಾಣ ಮಾಡಿರುವುದು.
- ಇದು ಕೇವಲ ತಾತ್ಕಾಲಿಕ ಮಳೆಗಾಲ ನಂದರ ದೊಡ್ಡ ಪ್ರಮಾಣದಲ್ಲಿ ಸೇತುವೆ ನಿರ್ಮಾಣ
ಕೆಂಭಾವಿ: ಪಟ್ಟಣದ ನಾರಾಯಣಪೂರ ಮುಖ್ಯ ಕಾಲುವೆಯ ಮೇಲಿರುವ ಸೇತುವೆ ದುರಸ್ತಿಗೆ ಅಂತೂ ಕಾಲ ಕೂಡಿ ಬಂದಿದ್ದು, ಬುಧವಾರದಿಂದ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯದಲ್ಲಿ ನಿರತವಾಗಿದೆ.
ಸುರಪುರ&ಹುನಗುಂದ ರಾಜ್ಯ ಹೆದ್ದಾರಿಯ ಈ ಕಾಲುವೆ ಸೇತುವೆ ಅನೇಕ ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿತ್ತು. ಈ ಕುರಿತು ವಿಜಯವಾಣಿ ಅನೇಕ ಬಾರಿ ವರದಿ ಪ್ರಕಟಿಸಿತ್ತು. ಇದೇ ಮುಖ್ಯ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು, ಜನರು, ಶಾಲಾ ವಾಹನ ಸಂಚಾರ ಮಾಡುತ್ತಿದ್ದು ಇದರ ಮೇಲೆ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಳೆಗಾಲ ಆರಂಭವಾದರಂತೂ ಈ ಬ್ರಿಜ್ ಸಂಪೂರ್ಣ ಕೆರೆಯಂತಾಗಿ ಸಂಚಾರ ಸಂಪೂರ್ಣ ಬಂದ್ ಆಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ಶಾಸಕರ, ಸ್ಥಳಿಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದ ಸ್ಥಳಿಯರು ಯಾವುದೆ ಪ್ರಯೋಜನವಾಗಿರಲಿಲ್ಲ.
ಸಿಸಿ ರಸ್ತೆ ನಿರ್ಮಾಣ: ಹದಗೆಟ್ಟಿದ್ದ ಸೇತುವೆ ರಸ್ತೆಯನ್ನು ಮರು ನಿರ್ಮಾಣ ಮಾಡುವಲ್ಲಿ ಇಲಾಖೆ ಕ್ರಮ ಕೈಗೊಂಡಿದ್ದು ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳಿಗೆ ಪರ್ಯಾಯ ಮಾರ್ಗ ತೋರಿಸಿ ಸಿಸಿ ರಸ್ತೆ ನಿರ್ಮಾಣದಲ್ಲಿ ಇಲಾಖೆ ಮುಂದಾಗಿದೆ. ಮಳೆಗಾಲ ಆರಂಭವಾಗುವ ಹಂತದಲ್ಲಿದ್ದು ಮೇಲಿಂದ ಮೇಲೆ ಹದಗೆಡುತ್ತಿರುವ ಈ ರಸ್ತೆಯನ್ನು ಉತ್ತಮ ಗುಣಮಟ್ಟದ ರಸ್ತೆಯಾಗಲಿ ಎಂಬುದೆ ಜನರ ಒತ್ತಾಯವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬುದು ಹಲವರ ಆಗ್ರಹ.
"
ಈ ಸೇತುವೆ ದುರಸ್ತಿ ಕಾರ್ಯ ಕೇವಲ ತಾತ್ಕಾಲಿಕವಾಗಿದ್ದು ಮಳೆಗಾಲ ಮುಗಿದ ತಕ್ಷಣ ಈ ಸೇತುವೆ ಮರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನೀರಾವರಿ ಇಲಾಖೆ ನಮ್ಮ ಇಲಾಖೆಗೆ ಈ ಸೇತುವೆ ಕಾರ್ಯ ಹಸ್ತಾಂತರಿಸಿದ್ದು ಶ್ರೀ ಈ ಸೇತುವೆ ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗುವುದು.
— > ಎಸ್.ಜಿ.ಪಾಟೀಲ್ ಇಇ ಲೋಕೋಪಯೋಗಿ ಇಲಾಖೆ