ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಅಂಗವಾಗಿ ಕೋಟೆಯ ಆವರಣದ ವಸ್ತುಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ ಪ್ರಾಚೀನ ನಾಣ್ಯಗಳ ಪ್ರದರ್ಶನವನ್ನು ಆಸಕ್ತರು ವೀಕ್ಷಿಸಿದರು.
ಮಡಿಕೇರಿ: ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಪ್ರಾಚೀನ ನಾಣ್ಯಗಳ ಪ್ರದರ್ಶನ ನಗರದ ಕೋಟೆಯ ಆವರಣದ ವಸ್ತುಸಂಗ್ರಹಾಲಯದಲ್ಲಿ ಸೋಮವಾರ ನಡೆಯಿತು.
ಕೊಡಗಿನ ಖ್ಯಾತ ವೈದ್ಯ ಹಾಗೂ ನಾಣ್ಯ ಸಂಗ್ರಹಕಾರ ಡಾ. ಎಂ.ಜಿ. ಪಾಟ್ಕರ್ ಅವರ ಎರಡು ಸಾವಿರಕ್ಕೂ ಹೆಚ್ಚು ನಾಣ್ಯಗಳ ಪ್ರದರ್ಶನ ನೂರಾರು ಸಂಖ್ಯೆಯ ಜನರನ್ನು ಆಕರ್ಷಿಸಿತು.
ಖ್ಯಾತ ನಾಣ್ಯ, ನೊಟು ಸಂಗ್ರಹಕಾರರಾದ ಹುಣಸೂರು ಪಿ.ಕೆ. ಕೇಶವಮೂರ್ತಿ ಅವರು ಪ್ರಾಚೀನ ನಾಣ್ಯಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ನಾಣ್ಯಗಳ ಪ್ರದರ್ಶನದಿಂದ ವಿದ್ಯಾರ್ಥಿಗಳು ಪುಸ್ತಕದಲ್ಲಿ ಓದುವ ಇತಿಹಾಸವನ್ನು ಕಣ್ಣಾರೆ ನೋಡಿ ಕಲಿಯಲು ಉತ್ತಮ ವೇದಿಕೆಯಾಗಿದೆ. ಇದು ಮುಂದಿನ ಪೀಳಿಗೆಗೆ ಇತಿಹಾಸದ ವಿವಿಧ ರಾಜವಂಶಗಳ, ಲಾಂಛನಗಳ ಹಾಗೂ ಆಯಾ ಕಾಲದ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಯಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಇತಿಹಾಸಕಾರರ ಕಲಿಕೆಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ, ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶನ ನಡೆಸಲಾಗುತ್ತದೆ. ಈ ಹಿಂದೆ ತಾನು ನಾಣ್ಯ ಮತ್ತು ನೋಟುಗಳ ಪ್ರದರ್ಶನ ನಡೆಸುತ್ತಿದ್ದು, ಈ ಬಾರಿ ನಾಡಿನ ಖ್ಯಾತ ವೈದ್ಯ ಹಾಗೂ ನಾಣ್ಯ ಸಂಗ್ರಹಕಾರರೂ ಆಗಿರುವ ಡಾ.ಎಂ.ಜಿ.ಪಾಟ್ಕರ್ ಮತ್ತು ವಿಜಯಲಕ್ಷೀ ಪಾಟ್ಕರ್ ಅವರು ಸಂಗ್ರಹದ ನಾಣ್ಯಗಳ ಪ್ರದರ್ಶನ ನಡೆಸಲಾಗುತ್ತಿದೆ.
ಇಲ್ಲಿ ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಚಲಾವಣೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಕುಶಾನರು, ಗುಪ್ತ ಸಾಮ್ರಾಜ್ಯ, ಶಾತವಾಹನ, ಕ್ಷತ್ರಪ, ಚೋಳ, ಪಲ್ಲವ, ಪಾಂಡ್ಯ, ವಿದೇಶಿ ಆಕ್ರಮಣಕಾರರ, ಬ್ರಿಟಿಷರ ನಾಣ್ಯಗಳು, ಸ್ವಾತಂತ್ರ್ಯ ಪೂರ್ವ, ನಂತರದ ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ, ಕಂಚಿನ ನೂರಾರು ನಾಣ್ಯಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.
ಡಾ. ಎಂ.ಜಿ. ಪಾಟ್ಕರ್, ವಿಜಯಲಕ್ಷೀ ಪಾಟ್ಕರ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ. ರೇಖಾ ಹಾಗೂ ಸಿಬ್ಬಂದಿ ಇದ್ದರು.