ರಾಜ್ಯ

ಕನ್ನಡ ನಾಡಧ್ವಜಕ್ಕೆ ಅಧಿಕೃತ ಮುದ್ರೆ? ಇಂದು ರಾಜ್ಯೋತ್ಸವ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಘೋಷಣೆ ನಿರೀಕ್ಷೆ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಎಪ್ಪತ್ತೊಂದನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ಅಸ್ಮಿತೆ ನಾಡಧ್ವಜವನ್ನು ಅಧಿಕೃತವಾಗಿ ಘೋಷಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ ಡಿ.ಕೆ. ಶಿವಕುಮಾರ್ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ನಾಡಧ್ವಜ ಸಂಬಂಧ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ರಾಜ್ಯ ಸರ್ಕಾರಕ್ಕೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ನಾಡಧ್ವಜ ಹೊಂದಲು ಸಾಂವಿಧಾನಿಕ ಮಾನ್ಯತೆ ಇದೆಯೇ ಇಲ್ಲವೇ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜವನ್ನು ಘೋಷಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲು ರಾಜ್ಯ ಸರ್ಕಾರ ಸಜ್ಜಾಗಿದೆ.

1956ರಲ್ಲಿ ಕನ್ನಡಿಗರು ನೆಲೆಸಿರುವ ಪ್ರದೇಶಗಳು ಒಳಗೊಂಡು ರಾಜ್ಯ ಏಕೀಕರಣಗೊಂಡರೂ ಕರ್ನಾಟಕ ಹೆಸರು ಪಡೆಯಲು 17 ವರ್ಷ ಹೋರಾಟ ನಡೆಸಬೇಕಾಯಿತು. 1973ರಲ್ಲಿ ವಿಶಾಲ ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎನ್ನುವ ಹೆಸರನ್ನು ಅಧಿಕೃತವಾಗಿ ಪಡೆದುಕೊಂಡಿತಾದರೂ ಅಧಿಕೃತ ನಾಡಧ್ವಜ ಹೊಂದಬೇಕೆನ್ನುವ ಕನ್ನಡಿಗರ ಕನಸು ಕನಸಾಗಿಯೇ ಉಳಿದಿತ್ತು. ಇದೀಗ ಅಧಿಕೃತ ಮುದ್ರೆ ಒತ್ತುವ ಸಮಯ ಬಂದಿದ್ದು, ಕನ್ನಡ ಪರ ಹೋರಾಟಗಾರರ, ಕನ್ನಡಿಗರ ಮತ್ತು ಸಾಹಿತಿಗಳ ಒತ್ತಾಯ ಈಡೇರುವ ಸಾಧ್ಯತೆಗಳು ಗೋಚರಿಸಿವೆ. ಭಾನುವಾರ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವದ ದಿನವೇ ಧ್ವಜಕ್ಕೆ ನಾಡಧ್ವಜದ ಸ್ಥಾನಮಾನ ನೀಡುವ ಮೂಲಕ ಹೊಸ ಇತಿಹಾಸ ಬರೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ನಾಡ ಧ್ವಜ ಹೋರಾಟದ ಹಾದಿ

ಹಳದಿ, ಕೆಂಪು ಬಣ್ಣದ ಧ್ವಜವನ್ನು ಎಲ್ಲೆಡೆ ಬಳಸಲು ಶುರುವಾದ ಮೇಲೆ ನಾಡಧ್ವಜವಾಗಿ ಘೋಷಿಸಬೇಕೆಂದು 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಕ್ಕೊತ್ತಾಯ ಮಂಡಿಸಿತು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಿತು. ಅಂದಿನ ಜೆ.ಎಚ್. ಪಟೇಲ್ ಸರ್ಕಾರ ಕಾನೂನು ತೊಡಕಿನ ಕಾರಣ ನೀಡಿ ಬೇಡಿಕೆಯನ್ನು ಕೈಚೆಲ್ಲಿತು. 13 ವರ್ಷದ ನಂತರ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ 2011ರಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಲು ಸುತ್ತೋಲೆ ಹೊರಡಿಸಿದ್ದರು. ಆದರೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಒಪ್ಪಿಗೆ ನೀಡಲಿಲ್ಲ. ಈ ಆದೇಶವೂ ಸಿಂಧುವಾಗಲಿಲ್ಲ. ಹಾಗಾಗಿ ಅಧಿಕೃತ ನಾಡಧ್ವಜ ಹೊಂದುವ ವಿಚಾರದಲ್ಲಿ ಸಾಂವಿಧಾನಿಕ ನೆಲೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿತ್ತು.

ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಂಗಳೂರು: ಗದಗ ಜಿಲ್ಲೆಯ ಜಗದ್ಗುರು ಡಾ.ಅನ್ನದಾನೇಶ್ವರ ಮಹಾಶಿವಯೋಗಿ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ, ಮಾಜಿ ಮುಖ್ಯ ಕಾರ್ಯದರ್ಶಿ ಥೆರೇಸಾ ಭಟ್ಟಾಚಾರ್ಯ ಸೇರಿ ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಭಾನುವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನವಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲ ಗಣ್ಯರಿಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿಧಾನ ಸಭೆ ಸಭಾಧ್ಯಕ್ಷ ಗುರುಪಾದಗೌಡ ಸಂಗನಗೌಡ ಪಾಟೀಲ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಸಚಿವ ಶಿವರಾಜ ಎಸ್. ತಂಗಡಗಿ, ಶಾಸಕ ಉದಯ ಬಿ. ಗರುಡಾಚಾರ್, ಇಲಾಖೆ ಕಾರ್ಯದರ್ಶಿ ಎನ್. ಮಂಜುಶ್ರೀ, ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಇತರರು ಭಾಗವಹಿಸಲಿದ್ದಾರೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ.

ಧ್ವಜದ ವಿನ್ಯಾಸ ಹೇಗಿದೆ?

ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜ ಮತ್ತು ಮಧ್ಯದಲ್ಲಿ ಸರ್ಕಾರದ ಲಾಂಛನ ಇರುವ ಧ್ವಜವನ್ನು 2018ರ ಮಾರ್ಚ್​ನಲ್ಲಿ ರಚಿಸಿದ್ದ ಸಮಿತಿ ಅಂತಿಮಗೊಳಿಸಿತು. ಹಳದಿ ಮತ್ತು ಕೆಂಪು ಬಣ್ಣದ ಜತೆಗೆ ಶಾಂತಿಯ ಸಂಕೇತವಾದ ಬಿಳಿಯ ಬಣ್ಣ ಸೇರಿಸಿಕೊಂಡು ನಾಡಧ್ವಜದ ವಿನ್ಯಾಸ ರಚಿಸಲಾಗಿದೆ. ಬಿಳಿ ಬಣ್ಣ ಶುದ್ಧತೆ, ಶಾಂತಿಯನ್ನು ಸಂಕೇತಿಸಿದರೆ ಹಳದಿ ಬಣ್ಣವು ಸಂತೋಷ ಮತ್ತು ಸಕಾರಾತ್ಮಕತೆ ಹಾಗೂ ಕೆಂಪು ಬಣ್ಣವು ಶೌರ್ಯ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಬಿಳಿಯ ಬಣ್ಣದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಇರಲಿದೆ.