ಇದನ್ನೇ ಮರುಭೂಮಿಯಲ್ಲಿನ Oasis ಎನ್ನುವುದು. ಇಂಗ್ಲಿಷ್ನಲ್ಲಿ ‘fertile spot in a desert, where there is a spring or well and more or less vegetation’ ಎಂಬ ವಿವರಣೆ. ಫ್ರೆಂಚ್, ಲ್ಯಾಟಿನ್, ಗ್ರೀಕ್ನಲ್ಲೂ ಟಚಠಜಿಠ ಎಂದೇ ಬಳಕೆ. ಮೂಲ ಈಜಿಪ್ಷಿಯನ್ ಭಾಷೆಯದಿರಬೇಕೆಂದು ತಜ್ಞರ ಅಭಿಪ್ರಾಯ. ಅರೇಬಿಕ್ನ ‘ವಹಾಹ್’ (ವಾಸಸ್ಥಳ) ಪದಮೂಲವೂ ಅದೇ ಅಂತೆ. ಈಜಿಪ್ಟ್ನಲ್ಲಿರುವ ‘ಸಿವಾ’, ಪೆರುವಿನಲ್ಲಿರುವ ‘ಹ್ವಾಕಚಿನಾ’, ಟ್ಯುನಿಸಿಯಾದಲ್ಲಿರುವ ‘ಚೆಬಿಕಾ’, ಓಮನ್ನಲ್ಲಿರುವ ‘ವಾಡಿಬನಿ ಖಲಿದ್’ ಮುಂತಾದುವು ಕೆಲವು ಜಗತ್ಪ್ರಸಿದ್ಧ ಓಯಸಿಸ್ಗಳು. ಅವು ಪ್ರವಾಸಿ ಆಕರ್ಷಣೆಗಳೂ ಆಗಿವೆ. ಅಮೆರಿಕದಲ್ಲಿ ಅಂತಾರಾಜ್ಯ ಹೆದ್ದಾರಿಗಳಲ್ಲಿ ನೂರಾರು ಮೈಲು ದೂರ ಪ್ರಯಾಣಿಸುವಾಗ ನಡುವೆ ತಿಂಡಿತಿನಸು ಮತ್ತಿತರ ಆವಶ್ಯಕ ಸಾಮಗ್ರಿಗಳು ಸಿಗುವ ಹಾಗೂ ಪೆಟ್ರೋಲ್ ತುಂಬಿಸಿಕೊಳ್ಳುವ ಅನುಕೂಲಕ್ಕೆಂದೇ ನಿರ್ವಿುಸಿದ ನಡುಗುಡ್ಡೆಗಳನ್ನು ಓಯಸಿಸ್ ಎನ್ನುವುದಿದೆ. ಸಾಹಿತ್ಯದಲ್ಲಿ ಆಲಂಕಾರಿಕವಾಗಿ ಕಷ್ಟಕರ ಪರಿಸ್ಥಿತಿಯ ನಡುವೆ ಕಂಡುಬರುವ ಭರವಸೆಯ ಆಶಾಕಿರಣವನ್ನು ‘ಮರುಭೂಮಿಯಲ್ಲಿ ಓಯಸಿಸ್ ಕಂಡುಬಂದಂತೆ’ ಎಂದು ಬಣ್ಣಿಸುವುದಿದೆ.
ಓಯಸಿಸ್ಗೆ ಕನ್ನಡ ಪದ ತಿಳಿಸುವ ಭರದಲ್ಲಿ ಕೆಲವು ಓದುಗರು ‘ಮರೀಚಿಕೆ’ ಎಂದು ಸೂಚಿಸಿದ್ದಾರೆ. ಆದರೆ ಅದು Oasis ಅಲ್ಲ, Mirage. ಮರೀಚಿ ಎಂದರೆ ಸಂಸ್ಕೃತದಲ್ಲಿ ಸೂರ್ಯಕಿರಣ ಎಂಬ ಅರ್ಥವಿದೆ. ಸೂರ್ಯಕಿರಣಗಳ ವಕ್ರೀಭವನದಿಂದ ಉಂಟಾಗುವ ಭ್ರಮೆ, ನೀರಿದೆಯೇನೋ ಎಂದೆನಿಸಿದರೂ ನಿಜವಾಗಿ ನೀರಿಲ್ಲದಿರುವುದು ಮರೀಚಿಕೆ. ಮರುಭೂಮಿಯಲ್ಲಷ್ಟೇ ಅಲ್ಲ, ಬಿರುಬಿಸಿಲಿನಲ್ಲಿ ರಸ್ತೆಗಳ ಮೇಲೂ ದೂರದಿಂದ ದೃಷ್ಟಿ ಹಾಯಿಸಿದಾಗ ಹಾಗೆ ಕಾಣುವುದಿದೆ. ಅದನ್ನೇ ಬಿಸಿಲ್ಗುದುರೆ, ಮೃಗತೃಷ್ಣಾ ಅಂತಲೂ ಹೇಳುತ್ತಾರೆ. ಪ್ರಾಣಿಗಳು ಅದನ್ನು ಅನುಸರಿಸುತ್ತ ಹೋಗಿ ಕೊನೆಗೂ ನೀರು ಸಿಗದೇ ಸಾಯುತ್ತವೆ. ಓಯಸಿಸ್ ಹಾಗಲ್ಲ, ಅಲ್ಲಿ ನಿಜವಾಗಿಯೂ ನೀರಿರುತ್ತದೆ. ಈ ದೃಷ್ಟಿಯಿಂದ ‘ನೀರೊಸರು’ ಎಂಬ ಪದವನ್ನು ಬಹಳಷ್ಟು ಓದುಗರು (ಲಲಿತಾ ಬಾಳಿಹಳ್ಳಿಮಠ, ಶ್ರೀನಿವಾಸ ಭಟ್ ಹೊಸನಗರ, ಗೋಪಾಲಕೃಷ್ಣ ಮುತಾಲೀಕ, ಅಂಜನಾ ತುಮಕೂರು, ವಿನಾಯಕ ಕಾಮತ್, ರಾಜೇಶ್ವರಿ ಶಿವಮೊಗ್ಗ, ಸುನೀಲ್ ಗರ್ದೆ, ಮಧುಕರ ಸೊಪ್ಪಿನ, ವಿನೋದ ರಾಮಚಂದ್ರ, ವನಜಾಕ್ಷಿ ಮತ್ತೂರು, ಉಮಾ ಪ್ರಭು, ಭಾಗ್ಯಶ್ರೀ ಕುಲಕರ್ಣಿ, ಪದ್ಮಾ ಬದರಿನಾಥ್, ರಚಿತಾ ಅಶ್ವತ್ಥಪುರ, ಜಿ.ನಾರಾಯಣ ರಾವ್, ಶ್ರೀಕಾಂತ ಗೋಡಖಿಂಡಿ ದಾಂಡೇಲಿ, ಸುರೇಂದ್ರ ಪೈ, ರಾಜು ಕೋಳಿವಾಡ, ಬೃಂದಾ ದತ್ತ, ಎನ್.ವಿ ಶಂಕರ್, ಭವಾನಿ ಜೋಶಿ ಸಿಂದಗಿ, ಜಿ.ಎಚ್.ಸಂಕಪ್ಪ, ಗೋಪಿನಾಥ ಭರಮಸಾಗರ, ನರೇಂದ್ರನಾಥ ಎಚ್.ಎಂ ಮುಂತಾದವರು) ಸೂಚಿಸಿದ್ದಾರೆ. ಒಪ್ಪಬಹುದಾದರೂ ಇದು ನೀರಿನ ಝುರಿ ಎಂದಷ್ಟೇ ಅರ್ಥ ಕೊಡಬಲ್ಲದು. ಇದರಲ್ಲಿ ಮರುಭೂಮಿಯ ಚಿತ್ರಣ ಬಾರದು. ಝುರಿ ಅಥವಾ ನೀರಿನ ಒರತೆಗಳು ಹಚ್ಚಹಸುರಿನ ವನರಾಜಿಯಲ್ಲೂ ಕಂಡುಬರುತ್ತವಲ್ಲ?
ಅದಕ್ಕಿಂತ ‘ಜೀವಜಲ’ (ಪ್ರಕಾಶ.ಬಿ ಮೈಸೂರು, ಸೀತಾ ವ್ಯಾಸಮುದ್ರಿ, ತ್ರಿವೇಣಿ ಬೆಂಗಳೂರು, ಯು.ಪರಮೇಶ್ವರ ಭಟ್, ಬಿ.ಕೆ ಸಂಪತ್ ಕುಮಾರ್, ಶಶಿಕಲಾ ಮೊಟೆಬೆನ್ನೂರು, ಯಶೋದಾ ಎಂ.ಗೋಪಿ ಮುಂತಾದವರ ಆಯ್ಕೆ) ವಾಸಿ. ಇದರಲ್ಲಿ ಮರುಭೂಮಿಯ ಪ್ರಸ್ತಾವ ಇಲ್ಲವಾದರೂ ಜೀವವುಳಿಸುವ ಜಲ, ದುರ್ಲಭವಾದದ್ದು ಎಂದಂತೂ ಗೊತ್ತಾಗುತ್ತದೆ. ಮರಳಿನಲ್ಲೇ ನೀರಿನ ಒರತೆ ಎಂದು ಸಂಸ್ಕೃತ ಪದಗಳಿಂದ ತಿಳಿಸುವ ‘ಸಿಕತಜಲ’ (ಇಂಗ್ಲೆಂಡ್ನಿಂದ ಡಾ. ಶ್ರೀವತ್ಸ ದೇಸಾಯಿ) ಮತ್ತು ‘ಮರುಜಲ’ (ನಿತ್ಯಾನಂದ ಬ್ರಹ್ಮಾವರ) ಇನ್ನೂ ಚೆನ್ನಾಗಿವೆ. ಹಾಗೆಯೇ ‘ಮರಳಕೆರೆ’ (ಟೊರೊಂಟೊದಿಂದ ಸಹನಾ ಹರೇಕೃಷ್ಣ) ಮತ್ತು ‘ಮರಳೂಟೆ’ (ಮೈಸೂರಿನಿಂದ ವಿಜಯಲಕ್ಷ್ಮಿ ಎಸ್) ಸಹ ಮರುಭೂಮಿಯ ಚಿತ್ರಣವನ್ನು ಕೊಡುವುದರಲ್ಲಿ ಯಶಸ್ವಿಯಾಗುತ್ತವೆ. ಇವುಗಳಿಗಿಂತಲೂ ಆಕರ್ಷಕ, ಅರ್ಥಪೂರ್ಣ ಮತ್ತು ಜನಮನದಲ್ಲಿ ಬೇಗನೇ ನೆಲೆಯಾಗಬಲ್ಲವೆಂದು ಅನಿಸುವ ಚಂದದ ಎರಡು ಪ್ರವೇಶಿಕೆಗಳು ಬಂದಿವೆ: ರಘು ಬಿ. ಗಿರಿಗೌಡನಕೊಪ್ಪಲು ಅವರು ಸೂಚಿಸಿದ ‘ಬಂಜರುಬುಗ್ಗೆ’ ಮತ್ತು ಕೃಷ್ಣ ಬರ್ವೆ ಅವರು ಸೂಚಿಸಿದ ‘ಝುಳಕೊಳ’. ಇವು ಅಚ್ಚಕನ್ನಡದವೂ ಹೌದು, ಉಚ್ಚಾರಕ್ಕೆ ಸುಲಭವೂ ಹೌದು, ಪ್ರಾಸಯುಕ್ತ ಆದ್ದರಿಂದ ನೆನಪಲ್ಲಿ ಉಳಿಯುವಂಥವೂ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಓಯಸಿಸ್ಗೆ ಸರ್ವರೀತಿಯಲ್ಲಿ ಸಂವಾದಿಯಾಗಬಲ್ಲವೂ ಹೌದು.
ಕಳೆದ ಸಲ ಕೇಳಿದ್ದ Holdall ಪದ ಕೆಲವು ಓದುಗರನ್ನು ಹಳೆಯ ನೆನಪುಗಳ ಅಂಗಳಕ್ಕೊಯ್ದಿದೆ. ‘ಚಿಕ್ಕಂದಿನಲ್ಲಿ ಬೇಸಿಗೆ ರಜೆಯಲ್ಲಿ ಮಂಗಳೂರಿನಿಂದ ಮದ್ರಾಸಿಗೆ ರೈಲಿನಲ್ಲಿ ಹೋಗುವಾಗ ತೆಳ್ಳನೆ ಹಾಸಿಗೆ, ಅದರ ಸಂದಿನಲ್ಲಿ ಬಟ್ಟೆ ಮತ್ತಿತರ ವಸ್ತುಗಳನ್ನಿಟ್ಟು ಚಾಪೆಯಂತೆ ಮಡಚಿ ಎರಡೂ ಬದಿಗಳಲ್ಲಿ ಬೆಲ್ಟ್ ಕಟ್ಟಿ ಮಧ್ಯದಲ್ಲಿ ಹಿಡಿಯನ್ನು ಸುತ್ತಿದ ಅಡಕುಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದೆವು’ ಎಂದು ಬೆಂಗಳೂರಿನಿಂದ ಆನಂದರಾಮ ಮಡಿ, ‘ಉಡುಪುಗಳು, ಹಾಸಿಗೆವಸ್ತ್ರ, ಚಿಕ್ಕಪುಟ್ಟ ಪಾತ್ರೆಪಗಡ, ದೈನಂದಿನ ಬಳಕೆಯ ವಸ್ತುಗಳು ಇತ್ಯಾದಿ ಎಲ್ಲವನ್ನೂ ತುಂಬಿ ಹಾಸಿಗೆಯಂತೆ ಮಡಚಿ ತೆಗೆದುಕೊಂಡು ಹೋಗುತ್ತಿದ್ದೆವು. 1970ನೇ ಇಸವಿಯಲ್ಲಿ ಕೆಲಸಕ್ಕೆಂದು ದೂರದ ಊರಿಗೆ ಹೋಗುವಾಗ ಇಂತಹ ಮಡಿಕೆಚೀಲ ಅಥವಾ ಅಡಕುಚೀಲ ತೆಗೆದುಕೊಂಡು ಹೋಗಿದ್ದೆ’ ಎಂದು ಬಲರಾಮ ಮಯ್ಯ ನೆನಪಿಸಿಕೊಂಡರೆ, ‘ಅರುವತ್ತು ವರ್ಷಗಳ ಹಿಂದಿನ ಮಾತು. ನಮ್ಮ ತಂದೆಯವರು ಮಿಲಿಟರಿಯಲ್ಲಿದ್ದರು. ಆಗ ಏರ್ಫೋರ್ಸ್, ನೇವಿ, ಆರ್ವಿು ಎಲ್ಲದಕ್ಕೂ ಮಿಲಿಟ್ರಿ ಎನ್ನುತ್ತಿದ್ದ ಕಾಲ. ಸೈನ್ಯದಲ್ಲಿದ್ದವರು ರೈಲಲ್ಲಿ ಹೋಗುವಾಗ ಬರುವಾಗ ಹೋಲ್ಡ್ಆಲ್ ಎಂಬ ಗಂಟುಮೂಟೆ ಹಿಡಿದು ಓಡಾಡುತ್ತಿದ್ದುದನ್ನು ನೋಡಿರುವೆ’ ಎಂದು ವಸಂತಕುಮಾರ್ ಕಲ್ಯಾಣಿ ಬರೆದಿದ್ದಾರೆ. ‘ಗಂಟುಮೂಟೆ’ ಪದವನ್ನೇ ಪಿ.ಜೆ.ರಾಘವೇಂದ್ರ, ಸುಬ್ರಹ್ಮಣ್ಯ ಎಸ್, ಗೀತಾ ಹೆಗಡೆ ದೊಡ್ಮನೆ ಮತ್ತು ಕುಶಲ್ ಭಾರದ್ವಾಜ್ ಕೂಡ ಸೂಚಿಸಿದ್ದಾರೆ. ಆದರೆ ಗಂಟುಮೂಟೆಗಿಂತ ‘ಅಡಕುಚೀಲ’ಕ್ಕೇ ಹೆಚ್ಚು ಪ್ರವೇಶಿಕೆಗಳು ಬಂದಿವೆ: ನಳಿನಿ ಜಿ.ಭಟ್ ಸೇರಾಜೆ, ಲಕ್ಷ್ಮಣ ರೆಡ್ಡಿ, ಎಂ.ಕೆ ಬದರಿನಾಥ್, ವಿರೂಪಾಕ್ಷಪ್ಪ ಶಾಂತಗೇರಿ, ಗಂಗಾ ಹೆಗಡೆ, ಭಾರತಿ ಪ್ರಕಾಶ್ ಶಿವಮೊಗ್ಗ, ಕಾಡೇಶ ವಿ.ಬಿ, ಗೋಪಾಲಕೃಷ್ಣ ಹೆಮ್ಮಿಗೆ, ಅಪ್ಪು ಮುತ್ಯ, ವೀರೇಶ ವಾಲಿ, ಎಂ.ಕೆ ರಮೇಶ್, ಜಯಲಕ್ಷಿ ್ಮ ಅಡಿಗ, ಡಾ.ಸಂಗಮೇಶ ಸುರಭಿ, ಸುಜಯ ಬಿ.ಜಿ ಮುಂತಾದವರು. ಅಡಕು ಅಥವಾ ಅಡುಕು ಎಂಬ ಪದಕ್ಕೆ ಕಸಾಪ ನಿಘಂಟುವಿನಲ್ಲಿ ‘ಒಂದರಮೇಲೊಂದನ್ನು ಪೇರಿಸು, ರಾಶಿಹಾಕು, ತುಂಬು, ಒಂದು ಕಡೆಯಿಂದ ಇನ್ನೊಂದು ಕಡೆಗೆ ತಂದಿಡು, ಸಾಗಿಸು...’ ಮುಂತಾದ ಅರ್ಥಗಳಿರುವುದನ್ನು ಗಮನಿಸಿದರೆ, ಪ್ರಯಾಣದಲ್ಲಿ ಎಲ್ಲವನ್ನೂ ತುಂಬಿಸಿಕೊಂಡು ಒಯ್ಯುವ ಚೀಲಕ್ಕೆ ಇದು ಸೂಕ್ತವೆನಿಸುತ್ತದೆ. ಶಾಲಾಮಕ್ಕಳ ಚೀಲಗಳೂ ಒಂದು ರೀತಿಯಲ್ಲಿ ಹೀಗೆಯೇ. ಮುಂಡಾಜೆ ರಾಮಚಂದ್ರ ಭಟ್ಟರೆಂಬ ಮಕ್ಕಳಕವಿ ಬರೆದ ‘ತಮ್ಮನ ಚೀಲದಿ ಏನಿದೆ ನೋಡಿ, ಸಿಕ್ಕಿದುದೆಲ್ಲ ತುಂಬಿಹ ಖೋಡಿ...’ ಎಂಬ ಪ್ರಸಿದ್ಧ ಶಿಶುಗೀತೆ ಇಲ್ಲಿ ನೆನಪಾಗುತ್ತದೆ.
ಇಂಗ್ಲಿಷ್ನಲ್ಲಿ Holdall ಎಂದರೆ ಎಲ್ಲವನ್ನೂ ಹಿಡಿದುಕೋ/ತುಂಬಿಸಿಕೋ ಎಂದು ತಾನೆ? ಅದನ್ನು ‘ಸರ್ವಗ್ರಾಹಿ’ ಎನ್ನಬಹುದೆಂದು ಶೀಲಾ ಜಿ.ಪಿ, ಅಣಕು ರಾಮನಾಥ್, ಸಾವಿತ್ರಿ ಬೇಲೆ ಬೇಡಕಿಹಾಳ, ವೆಂಕಟಕೃಷ್ಣ ಬೆಂಗಳೂರು, ರಮೇಶ ಎನ್.ಆರ್, ಕಂಪಲಾಪುರ ಶ್ರೀನಿವಾಸ್, ಶಶಿಕಲಾ ನರೇಂದ್ರನಾಥ್ ಮುಂತಾದವರ ಅಭಿಪ್ರಾಯ. ‘ಸರ್ವಧಾರಿ’ (ಈ ಹೆಸರಿನದೊಂದು ಸಂವತ್ಸರವೂ ಇದೆ) ಆಗಬಹುದೆನ್ನುತ್ತಾರೆ ಶಿವಶಂಕರ ಪ್ರಭು. ಹೋಲ್ಡ್ಆಲ್ಗೆ ಧ್ವನಿಸದೃಶವಾಗಿ ಕನ್ನಡದ ‘ಹಿಡಿಯೆಲ್ಲವ’ (ಜಗದೀಶ ಬಿ.ಎಸ್), ಅದೇ ಅರ್ಥದ ‘ತುಂಬೆಲ್ಲಾ’ (ಅನ್ನಪೂರ್ಣ ಹೇಮಚಂದ್ರ), ‘ಹೆಜ್ಜೋಳಿಗೆ’ (ರಮ್ಯಶ್ರೀ ಬಿ), ‘ಬಕಸಂಚಿ’ (ಡಾ.ದಯಾನಂದ ಭಟ್ಟ), ‘ಪಯಣಸಂಚಿ’ (ಅನಂತಕೃಷ್ಣ ಶಿವಮೊಗ್ಗ), ‘ತಿಮಿಂಗಿಲಚೀಲ’ (ರಶ್ಮಿ ರಾಜೇಂದ್ರ) ಇವೂ ಕೆಲವು ತರ್ಕಬದ್ಧ ಪ್ರವೇಶಿಕೆಗಳು.
ಕೊನೆಯದಾಗಿ Ribbon. ಇಂಗ್ಲಿಷ್ನಲ್ಲಿಯೂ ಬಹಳ ಪ್ರಾಚೀನವಾಗಿರುವ,riban,ribane, ruban ಮುಂತಾದ ರೂಪಗಳನ್ನು ದಾಟಿ ಬಂದಿರುವ ಪದ. ‘narrow woven bond of some fine material for omamental or other purposes’ ಎಂದು ವಿವರಣೆ. ಇಂಗ್ಲಿಷ್ನ bond, bandanna, bind, bond, bundle, ribbon ಮುಂತಾದುವು ಮತ್ತು ಸಂಸ್ಕೃತದ ಬಂಧ (ಕಟ್ಟುವಿಕೆ) ಪರಸ್ಪರ ಸಂಬಂಧವುಳ್ಳವು ಎನ್ನಲಾಗಿದೆ. ಕಟ್ಟಿದ್ದು ಚಂದ ಕಾಣಬೇಕೆಂದು ಬಯಸುವುದರಿಂದ ಕನ್ನಡದಲ್ಲಿ ‘ಸಿಂಗಾರಪಟ್ಟಿ’ (ಪ್ರಭುಪ್ರಸಾದ್ ನಡುತೋಟ, ಸಿದ್ದನಗೌಡ ಮುದಿಗೌಡ್ರ) ಮತ್ತು ‘ಅಲಂಕಾರಪಟ್ಟಿ’ (ರಮ್ಯ ಸೋಮಶೇಖರ್, ಮೀನಾಕ್ಷಿ ಟಕ್ಕಳಕಿ, ಶಿವಕುಮಾರ ಸಿಂಗಟಗರೆ, ರೇವತಿ ಜೋಶಿ, ವಾಮನರಾವ್ ದೇಶಪಾಂಡೆ, ಬಿ.ಎಸ್ ನಟರಾಜು, ಶೋಭಾ ತಿಪಟೂರು, ನಾಗೇಶ ಫಾಟಕ್, ಭಾರತಿ ಭಟ್, ಸುವರ್ಣಾ ಕೌಲ್ಗೀಕರ್, ಕೃಷ್ಣ ಎಸ್.ಕುಲಕರ್ಣಿ ಮುಂತಾದವರು) ಹೆಚ್ಚು ಸೂಕ್ತವೆನಿಸುತ್ತವೆ. ಏನನ್ನೇ ಆದರೂ ಕಟ್ಟಲಿಕ್ಕೆ ಬಳಸುವ ಪಟ್ಟಿಯಾದ್ದರಿಂದ ‘ಕಟ್ಟುಪಟ್ಟಿ’ (ಕೊಡೇರಿ ಲಕ್ಷ್ಮೀನಾರಾಯಣ ಕಾರಂತ, ಸಂತೋಷರಾವ್ ಕಡಬ, ರಾಮಚಂದ್ರ ಐ.ಎಂ, ಕಲಾ ಚಾರಿ, ಕೆ.ಎ.ಭಟ್ ಮುಂತಾದವರು) ಮತ್ತು ಅದು ಗಮನ ಸೆಳೆಯುವಂತೆ ಇರುತ್ತದಾದ್ದರಿಂದ ‘ಸೆಳೆಪಟ್ಟಿ’ (ಕಸ್ತೂರಿ ನಾಯಕ್) ಕೂಡ ತರ್ಕಬದ್ಧವಾಗಿಯೇ ಇವೆ. ಪದ ಕಟ್ಟುವ ಚಟುವಟಿಕೆಯು ಹೀಗೆ ಓದುಗರ ಬುದ್ಧಿಶಕ್ತಿಯ ಸಾಣೆಗೂ ಒದಗಿಬರುವುದನ್ನು ಕಂಡಾಗ ಸಂತೋಷವಾಗುತ್ತದೆ.
ಈ ವಾರದ ಮೂರು ಪದಗಳು:
1.Nodal: ನೋಡಲ್ ಎಂದು ಕನ್ನಡದಲ್ಲಿ ಬರೆದರೂ, ಹಳಗನ್ನಡದಂತೆ ಧ್ವನಿಸಿದರೂ, ಕನ್ನಡವಲ್ಲ! ಆದ್ದರಿಂದ ಹೊಸ ಪದ ಬೇಕಿದೆ.
2. Squad: ನಿರ್ದಿಷ್ಟ ಕಾರ್ಯ, ತನಿಖೆ ಅಥವಾ ಕಾರ್ಯಾಚರಣೆಗಾಗಿ ನೇಮಕಗೊಂಡ ವಿಶೇಷ ತಂಡ. ಕನ್ನಡದಲ್ಲಿ ಇದನ್ನು ಏನನ್ನೋಣ?
3. Templet : ಮಾದರಿಯೂ ಮಾರ್ಗದರ್ಶಿಯೂ ಹೌದಾದರೂ ಅವೇ ಪದಗಳು ಸಮರ್ಥವೆನಿಸವು. ಹೊಸದೊಂದು ಕನ್ನಡ ಪದ ಬೇಕು.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)