ತಂಗಡಗಿ ಸಮೀಪದ ನಾಗರಬೆಟ್ಟ ಗ್ರಾಮಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ನೊಂದ ಕುಟುಂಬದ ಸದಸ್ಯರು, ದಲಿತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು. ಡಿವೈಎಸ್ಪಿ ಚಂದ್ರಕಾಂತ್ ನಂದರಡ್ಡಿ, ನಿಡಗುಂದಿ ಸಿಪಿಐ ಶರಣಗೌಡ ಗೌಡ್ರ, ಮುದ್ದೇಬಿಹಾಳ ಸಿಪಿಐ ಮಹ್ಮದ ಸಿವುದ್ದಿನ್ ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಇತರರಿದ್ದರು.
- ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ
- ನೊಂದ ಕುಟುಂಬದವರ ಭೇಟಿ
ತಂಗಡಗಿ: ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಂಗರಗಿ ಕ್ರಾಸ್ ಹತ್ತಿರ ಎದುರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರವಿಚಂದ್ರ ಮಾದರ ವ್ಯವಸ್ಥಿತ ಕೊಲೆಯಾಗಿದೆ ಎಂದು ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಂಗಳವಾರ ನಾಗರಬೆಟ್ಟ ಗ್ರಾಮದ ಮೃತನ ಕುಟುಂಬಕ್ಕೆ ಭೇಟಿ ನೀಡಿ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಿದರು.
ಕೊಲೆ ಆರೋಪ ಕುರಿತು ಈಗಾಗಲೇ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಎಲ್ಲರೂ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಡಬೇಕು. ಅಪರಾಧಿಗಳಿಗೆ ಮುಲಾಜಿಲ್ಲದೇ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
ಮೃತನ ಕುಟುಂಬ, ದಲಿತ ಸಂಘಟನೆಗಳ ಮುಖಂಡರಿಂದ ಅಗತ್ಯ ಮಾಹಿತಿ ಪಡೆದುಕೊಂಡ ಅವರು, ತನಿಖೆ ಈಗಾಗಲೇ ಡಿಸಿಇಆರ್ ಅಂಗಳದಲ್ಲಿದೆ. ಕೊಲೆ ಯಾವ ಕಾರಣಕ್ಕೆ ಮಾಡಲಾಗಿದೆ? ಈ ಹಿಂದೆ ಏನಾದರೂ ಸಂಶಯಾಸ್ಪದ ಸುದ್ದಿಗಳು ಬಂದಿದ್ದರೆ ಹಿಂಜರಿಕೆಯಿಲ್ಲದೇ ನಮ್ಮ ಗಮನಕ್ಕೆ ತಂದಲ್ಲಿ ನ್ಯಾಯ ದೊರಕಿಸಿಕೊಡಲು ಸರಳವಾಗುತ್ತದೆ ಎಂದು ಹೇಳಿದರು.
ಅಂತ್ಯಕ್ರಿಯೆ ಯಾವ ಸ್ಥಳದಲ್ಲಿ ಮಾಡಲಾಗಿದೆ? ಯಾವ ಕಾರಣಕ್ಕೆ ಹತ್ಯೆ ಮಾಡಿರಬಹುದು? ಎಂಬ ಬಗ್ಗೆ ಅನುಮಾನಗಳಿದ್ದರೆ ತಿಳಿಸಿ. ಯಾರನ್ನೇ ವಶಪಡಿಸಿಕೊಳ್ಳಲಿ ಕೋರ್ಟ್ ಸಾಕ್ಷಿ ಕೇಳುತ್ತದೆ. ತನಿಖೆ ಅವಧಿ 3 ತಿಂಗಳವರೆಗೆ ಇರುತ್ತದೆ. ಅಷ್ಟರೊಳಗೆ ಎಲ್ಲಾ ಮಾಹಿತಿ ಲಭ್ಯವಾಗಬಹುದು, ಅಲ್ಲಿಯವರೆಗೆ ಸಹಕರಿಸಿ ಇಡಿ ಜಿಲ್ಲಾಡಳಿತವೇ ನಿಮ್ಮ ಜೊತೆಗಿದೆ ಎಂದು ಧೈರ್ಯ ಹೇಳಿದರು.
ಮುದ್ದೇಬಿಹಾಳ ತಾಲೂಕಿನಲ್ಲಿ ಹಲವು ಪ್ರಕರಣಗಳನ್ನು ತಿರುಚುವ ಕೆಲಸ ಮಾಡಿ ಮುಚ್ಚಿ ಹಾಕಿದ್ದಾರೆ. ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಇಲಾಖೆಯಿಂದ ನಮಗೆ ನ್ಯಾಯ ಸಿಗಲಿ ಹಾಗೂ ನಮಗೆ ರಾತ್ರಿ ಸಹ ರಕ್ಷಣೆ ನೀಡಿ ಎಂದು ಸ್ಥಳದಲ್ಲಿದ್ದ ಜಿಲ್ಲಾ ದೌರ್ಜನ್ಯ ಸಮಿತಿಯ ಮಲ್ಲು ತಳವಾರ, ತಿಪ್ಪಣ್ಣ ದೊಡಮನಿ, ಹರೀಶ ನಾಟಿಕಾರ, ಗುಂಡಪ್ಪ ಚಲವಾದಿ, ಬಸವರಾಜ ಮಾದರ, ಪ್ರಭು ಚಲವಾದಿ, ಚಂದಪ್ಪ ಮಾದರ, ನೊಂದ ಕುಟುಂಬದ ಹುಲಗಪ್ಪ ಮಾದರ, ತಿಪ್ಪಣ್ಣ ಮಾದರ, ಮಹಾದೇವಪ್ಪ ಕೆಸಾಪೂರ, ವೆಂಕಪ್ಪ ದಾಸರ ಇನ್ನಿತರರು ಮನವಿ ಮಾಡಿದರು.
ಡಿವೈಎಸ್ಪಿ ಚಂದ್ರಕಾಂತ್ ನಂದರಡ್ಡಿ, ಸಿಪಿಐ ಶರಣಗೌಡ ಗೌಡ್ರ, ಮಹ್ಮದ ಸಿವುದ್ದಿನ್, ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಇತರರಿದ್ದರು.