ಶಹಾಬಾದ್ನ ಶ್ರೀ ಶರಣಬಸವೇಶ್ವರ ದೇವಸ್ಥಾನ ರಸ್ತೆಯ ಪುಟ್ಪಾತ್ ಮಧ್ಯದಲ್ಲಿ ಹೊಸ ವಿದ್ಯುತ್ ಕಂಬಕ್ಕಾಗಿ ಪುಟಿಂಗ್ ಹಾಕಿರುವುದು.
- ಶಹಾಬಾದ್ನಲ್ಲಿ ನಗರಸಭೆ ಅಧಿಕಾರಿಗಳಿಂದ ಅವೈಜ್ಞಾನಿಕ ಕಾಮಗಾರಿ
- ಸರ್ಕಾರದ ಹಣ ಪೋಲು
ಶಹಾಬಾದ್: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ನೀಡಿದ ಅನುದಾನವನ್ನು ಅವೈಜ್ಞಾನಿಕ ಕಾಮಗಾರಿಗಳಿಗೆ ಪೋಲು ಮಾಡುವ ಮೂಲಕ ಇಲ್ಲಿನ ನಗರಸಭೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಗರೋತ್ಥಾನ&4 ಯೋಜನೆಯಡಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಬೀದಿಗಳಲ್ಲಿ ಹೊಸ ವಿದ್ಯುತ್ ಕಂಬ ಹಾಗೂ ದೀಪ ಅಳವಡಿಸುವ ಕಾಮಗಾರಿ ಇದಾಗಿದೆ. ಆದರೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಈಗಾಗಲೇ ವಿದ್ಯುತ್ ಕಂಬಗಳಿಂದ್ದರೂ ಮತ್ತೊಂದು ಕಂಬಗಳನ್ನು ಹಾಕುವ ಮೂಲಕ ಸರ್ಕಾರದ ಹಣ ಪೋಲು ಮಾಡುವ ಕೆಲಸವಾಗುತ್ತಿದೆ. ಯೋಜನೆಯಡಿ ನಗರದ ನೆಹರೂ ವೃತ್ತದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನ ಹಾಗೂ ನೆಹರೂ ವೃತ್ತದಿಂದ ಹೊನಗುಂಟಾ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ನೆಲ ಅಗೆಯಲಾಗಿದ್ದು, ಕಾಂಕ್ರಿಟ್ ಹಾಕಿ ಪುಟಿಂಗ್ ಮಾಡಲಾಗಿದೆ.
ಕೆಲವೆಡೆ ಪುಟ್ಪಾತ್ದಿಂದ ಒಂದು ಅಡಿ ದೂರದಲ್ಲಿ ನೆಲ ಅಗೆದರೆ, ಕೆಲ ಸ್ಥಳದಲ್ಲಿ ಪುಟ್ಪಾತ್ ಅನ್ನೇ ಅಗೆದು ಪುಟಿಂಗ್ ಹಾಕಲಾಗಿದೆ. ಇನ್ನು ಕೆಲವೆಡೆ ಅರ್ಧ ಪುಟಪಾತ್ ಹಾಗೂ ಅರ್ಧ ರಸ್ತೆ ಮೇಲೆ ಪುಟಿಂಗ್ ಹಾಕಲು ನೆಲ ಅಗೆಯಲಾಗಿದೆ. ಈ ಹಿಂದೆ ಜನರಿಗೆ ಅನುಕೂಲವಾಗಲಿ ಎಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಸಾಕಷ್ಟು ಮನೆ, ಅಂಗಡಿಗಳನ್ನು ಒಡೆದು ಪುಟ್ಪಾತ್ ಹಾಗೂ ಚರಂಡಿ ನಿರ್ಮಿಸಲಾಗಿದೆ. ಆದರೆ ಇದೀಗ ವಿದ್ಯುತ್ ಕಂಬ ನೆಪದಲ್ಲಿ ಅಧಿಕಾರಿಗಳೇ ಪುಟ್ಪಾತ್ ಅತಿಕ್ರಮಣಕ್ಕೆ ಮುಂದಾಗಿದ್ದಾರೆ ಎಂಬುದು ಜನರ ಆರೋಪವಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಗರಿಸಿ ಅವೈಜ್ಞಾನಿಕ ಕಾಮಗಾರಿಗೆ ಬ್ರೇಕ್ ಹಾಕುವ ಮೂಲಕ ಸರ್ಕಾರದ ಹಣ ಪೋಲಾಗುವುದನ್ನು ನಿಲ್ಲಿಸಬೇಕಿದೆ ಎಂಬುದು ಸ್ಥಳಿಯರ ಒತ್ತಾಯವಾಗಿದೆ.
ವಿದ್ಯುತ್ ದೀಪ ಅಳವಡಿಸಲು ಅನುದಾನ
ಶಹಾಬಾದ್ನಲ್ಲಿನ ಎಲ್ಲ ವಿದ್ಯುತ್ ಕಂಬಗಳಿಗೆ ಎಲ್ಇಡಿ ದೀಪ ಅಳವಡಿಸಬೇಕೆಂದು ಸರ್ಕಾರ ಸಿಸಿಎಂಸಿ ಯೋಜನೆಯಡಿ 2 ಕೋಟಿ ರೂ. ಮಂಜೂರು ಮಾಡಿದೆ. ಈಗಾಗಲೇ ಕಂಬಗಳ ಎಣಿಕೆ ಮಾಡಿ ವರದಿ ಸಲ್ಲಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಆಗಿದ್ದು, ಶ್ರೀದಲ್ಲಿಯೇ ಎಲ್ಲ ಹಳೇ ಕಂಬಗಳಿಗೆ ಮತ್ತೆ ವಿದ್ಯುತ್ ದೀಪ ಅಳವಡಿಸಲಾಗುತ್ತದೆ. ಹೀಗಿರುವಾಗ ನಗರೋತ್ಥಾನ ಯೋಜನೆಯಡಿ ಹೊಸ ಕಂಬ ಅಳವಡಿಕೆ ಎಷ್ಟರ ಮಟ್ಟಿಗೆ ಸರಿ ಎಂಬುವುದು ಜನರ ಪ್ರಶ್ನೆಯಾಗಿದೆ.
ಶಹಾಬಾದ್ ನಗರದಲ್ಲಿ ಹಳೇ ಕಂಬಗಳು ಸುಸ್ಥಿತಿಯಲ್ಲಿದ್ದು, ಹೊಸ ಕಂಬದ ಅವಶ್ಯಕತೆ ಇರಲಿಲ್ಲ. ಅವೈಜ್ಞಾನಿಕವಾಗಿದ್ದರೆ ಕೂಡಲೇ ಕಾಮಗಾರಿಯನ್ನು ನಿಲ್ಲಿಸುತ್ತೇನೆ. ಪುಟ್ಪಾತ್ ಮೇಲೆ ಕಂಬ ಹಾಕುವುದು ತಪ್ಪು, ನಾನು ಅಧಿಕಾರ ಸ್ವೀಕರಿಸಿ ಕೇವಲ 8 ದಿನವಾಗಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು.