ಕಲಬುರಗಿ ವಿಜಯನಗರ ಕಾಲನಿ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಗುರುವಾರ ಆಯೋಜಿಸಿದ್ದ ನೀಲಾಂಬಿಕಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಮಂಜುಳಾ ಜಾನೆ ಚಾಲನೆ ನೀಡಿ ಕಲಾಕೃತಿ ವೀಕ್ಷಿಸಿದರು. ಬಿ.ಎನ್.ಪಾಟೀಲ್, ವಿನಯಕುಮಾರ ರುದ್ರಸ್ವಾಮಿಮಠ, ಚಂದ್ರಹಾಸ ಜಾಲಿಹಾಳ, ನೀಲಾಂಬಿಕಾ ಇದ್ದರು.
- ಹಿರಿಯ ಕಲಾವಿದೆ ಮಂಜುಳಾ ಜಾನೆ ಅಭಿಪ್ರಾಯ
- ನೀಲಾಂಬಿಕಾ ಹಿರೇಮಠರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲಬುರಗಿ: ಕಲೆಯೇ ಸಂಪತ್ತಾಗಿರುವ ಕಲಾವಿದರೇ ದೇಶದ ಸಾಂಸ್ಕೃತಿಕ ರಾಯಭಾರಿಗಳು ಎಂದು ಹಿರಿಯ ಚಿತ್ರಕಲಾವಿದೆ ಮತ್ತು ಕೃತಿಕಾ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಮಂಜುಳಾ ಬಿ.ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಡಿ ವಿಜಯನಗರ ಕಾಲನಿಯ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಗುರುವಾರ ಆಯೋಜಿಸಿದ್ದ ನೀಲಾಂಬಿಕಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಅವರು, ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಸೀಮಿತಳಾಗಿದ್ದಳು. ಆದರೀಗ ಚಿತ್ರಕಲಾ ಸೇರಿ ವೃತ್ತಿಯೊಂದಿಗೆ ಅನೇಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಚಿತ್ರಕಲಾವಿದ ಬಿ.ಎನ್. ಪಾಟೀಲ್ ಮಾತನಾಡಿ, ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕಲಾ ಕ್ಷೇತ್ರ ಮಾತ್ರ ಕೆಲವನ್ನು ಮಾತ್ರ ಆರಿಸಿಕೊಳ್ಳುತ್ತದೆ. ಅದರಂತೆ ನೀಲಾಂಬಿಕಾ ಕಲಾಕೃತಿಗಳಲ್ಲಿ ರೇಖೆ, ಬಣ್ಣ, ಮೈವಳಿಕೆಗಳ ಸಮತೋಲನವಿದೆ. ಕಲ್ಯಾಣ ಕರ್ನಾಟಕದ ಕಲಾವಿದೆಯರು ರಾಜ್ಯದ ಗಡಿ ದಾಟಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಯಕುಮಾರ ರುದ್ರಸ್ವಾಮಿಮಠ ಮಾತನಾಡಿ, ಶ್ರೇಷ್ಠ ಕಲಾವಿದೆಯರಾದ ಅಮೃತ ಶೇರಗಿಲ್, ನಳಿನಿ ಮಳಿನಿ, ಅನುಪಮ ಸೂದ್, ಪುಷ್ಪಮಾಲಾ ಸೇರಿ ಅನೇಕರು ಭಾರತೀಯ ಚಿತ್ರಕಲಾ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ನೀಲಾಂಬಿಕಾ ಅವರ ವರ್ಣ ಚಿತ್ರಗಳಲ್ಲಿ ಆಧುನಿಕತೆ ಸ್ಪರ್ಶದ ಜತೆ ರೇಖಾಚಿತ್ರಗಳಲ್ಲಿ ಶೈಕ್ಷಣಿಕ ಕಲಿಕಾ ಶೈಲಿ ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅನುಚಂದ್ರ ಆರ್ಟ ಸ್ಟುಡಿಯೋ ಮುಖ್ಯಸ್ಥ ಚಂದ್ರಹಾಸ ಜಾಲಿಹಾಳ ಮಾತನಾಡಿದರು. ಬಸವರಾಜ ಜಾನೆ, ನಿಂಗಣ್ಣ ಕೇರಿ, ದಾನಯ್ಯ ಚೌಕಿಮಠ, ಡಾ.ಪರಶುರಾಮ, ಡಾ.ಕೆ.ಎಂ. ಕುಮಾರಸ್ವಾಮಿ, ಮಹೇಶ ಎಂ., ಮಲ್ಲಿಕಾರ್ಜುನ ಕೊರಳ್ಳಿ, ಸಂಗಮೇಶ ಚಿಲಶೆಟ್ಟಿ, ಕಾವ್ಯ ಗಡ್ಡಿ, ಸೂರ್ಯಕಾಂತ ನಂದೂರ, ಶಶಿಕಾಂತ ಪಾಟೀಲ್ ಇತರರಿದ್ದರು. ಲಕ್ಷ್ಮೀ ಬೇರೂರು ಪ್ರಾರ್ಥನೆ ಗೀತೆ ಹಾಡಿದರು. ಕವಿತಾ ಕಟ್ಟೆ ಸ್ವಾಗತಿಸಿದರು. ನೀಲಾಂಬಿಕಾ ವಂದಿಸಿದರು. ಮಲ್ಲಿಕಾರ್ಜುನ ಮುಗಳಿ ನಿರೂಪಣೆ ಮಾಡಿದರು.
ಕರ್ನಾಟಕದಲ್ಲಿ ಶೇ.35ರಷ್ಟು ಮಹಿಳಾ ಕಲಾವಿದರು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮಹಿಳೆಯರು ಕಲಾ ಕ್ಷೇತ್ರದ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರದರ್ಶನಗಳಲ್ಲಿ ಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ಅಗತ್ಯ.
— ವಿನಯಕುಮಾರ್ ರುದ್ರಸ್ವಾಮಿಮಠ್, ಸಹಾಯಕ ಪ್ರಾಧ್ಯಾಪಕ, ಸಿಯುಕೆ ಕಲಬುರಗಿ.