ಸಚಿವ ಪಿ.ಎಂ.ನರೇಂದ್ರಸ್ವಾಮಿ  
ರಾಜ್ಯ

ಕ್ಷೇತ್ರಗಳ ಮರುವಿಂಗಡಣೆ ಮಸೂದೆ ದ್ವಂದ್ವ: ಸಚಿವ ಪಿ.ಎಂ.ನರೇಂದ್ರಸ್ವಾಮಿ ಅಭಿಮತ- P.M. Narendraswamy

ಹರೀಶ್​​ ಕೆ.ಸಿ.
ಬೆಂಗಳೂರು: ಕೇಂದ್ರ ಸರ್ಕಾರವು 2011ರ ಜನಗಣತಿ ಆಧಾರದಲ್ಲಿ ರೂಪಿಸಿರುವ ಕ್ಷೇತ್ರಗಳ ಮರುವಿಂಗಡಣೆ ಮಸೂದೆ ದ್ವಂದ್ವದಿಂದ ಕೂಡಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ,
ಡಾ. ಮನಮೋಹನ್‌ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ, ಬುಧವಾರ ನಗರದಲ್ಲಿ ‘ಚುನಾವಣಾ ಕ್ಷೇತ್ರ ಪುನರ್ ವಿಂಗಡಣೆ -2027: ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಕರ್ನಾಟಕದ ಭವಿಷ್ಯ’ ವಿಷಯದ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮರುವಿಂಗಡಣೆ ಮಸೂದೆಯಿಂದ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಮಾರಕವಾಗಲಿದೆ. ದೇಶದ ಯುವ ಪೀಳಿಗೆಯ ಕನಸುಗಳಿಗೆ ತಣ್ಣೀರುಚುತ್ತಿರುವ ಕೇಂದ್ರವು, ಇದೀಗ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಸ್ವರೂಪವನ್ನು ತಿರುಚುವ ಮೂಲಕ ರಾಜಕೀಯ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ನಮ್ಮ ಸರ್ಕಾರವು ರೂಪಿಸಿರುವ ಪ್ರತ್ಯೇಕ ಅನುದಾನ ವ್ಯವಸ್ಥೆಯನ್ನೂ ಕೇಂದ್ರದಿಂದ ಜಾರಿಗೊಳಿಸಿ ಸಾಮಾಜಿಕ ನ್ಯಾಯದ ಬದ್ಧತೆ ತೋರಬೇಕೆಂದು ಸಚಿವರು ಒತ್ತಾಯಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸಂವಿಧಾನ ದತ್ತವಾದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಕೇಂದ್ರದ ಆಡಳಿತಾರೂಢ ಪಕ್ಷ,ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಜನನ ಪ್ರಮಾಣ ನಿಯಂತ್ರಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ದಕ್ಷಿಣದ ರಾಜ್ಯಗಳಿಗೆ ಇದು ಮುಳುವಾಗಲಿದೆ ಎಂದರು.
ಕುಲಪತಿ ಪ್ರೊ.ಬಿ. ರಮೇಶ್, ಎಂಎಲ್ಸಿ ಕೆ.ಶಿವಕುಮಾರ್, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಸೇರಿ ಮತ್ತಿತರರಿದ್ದರು.