ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಧ್ಯಾನದ ಶಕ್ತಿಯನ್ನು ಜಗದಗಲ ಪಸರಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ 180ಕ್ಕೂ ಅಧಿಕ ದೇಶಗಳಲ್ಲಿ ಅಧ್ಯಾತ್ಮದ ಸಂಸ್ಕೃತಿಯನ್ನೂ ಹರಡಿದೆ. ಮಾನವೀಯ ಸೇವಾ ಕಾರ್ಯಗಳ ಮೂಲಕ ಜನಸೇವೆಯಲ್ಲೇ ಜನಾರ್ದನನನ್ನು ಸಾಕ್ಷಾತ್ಕರಿಸುತ್ತಿರುವ ಸಂಸ್ಥೆ 45 ವರ್ಷಗಳ ಸಾರ್ಥಕ ಪಯಣ ಪೂರ್ಣಗೊಳಿಸಿದೆ.
ಶಾಂತಿ, ಸಂತೃಪ್ತಿಯ ಸಂದೇಶ ಹಾಗೂ ಸುದರ್ಶನ ಯೋಗ ಕ್ರಿಯೆ ಮೂಲಕ ಅಸಂಖ್ಯ ಜನರ ಬದುಕನ್ನು ಬದಲಿಸಿರುವ, ಅವರ ಮೊಗದಲ್ಲಿ ನೆಮ್ಮದಿಯ ನಗು ಅರಳಿಸಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ 70ನೇ ವರ್ಷದ ಸಂಭ್ರಮ. ಈ ನಿಮಿತ್ತ ಬೆಂಗಳೂರಿನ ಕನಕಪುರ ರಸ್ತೆಯ ಆರ್ಟ್ ಅಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಿರ್ಮಾಣಗೊಂಡ ಭವ್ಯ ಧ್ಯಾನ ಮಂದಿರವನ್ನು ಇಂದು (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಸಾವಿರಾರು ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಭಕ್ತರ ವಲಯದಲ್ಲಿ ಗುರುದೇವ ಎಂದೇ ಕರೆಯಲ್ಪಡುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಇಂದು ಜಗತ್ತಿನಾದ್ಯಂತ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಜಾಗತಿಕ ಶಾಂತಿಗಾಗಿ ಶ್ರಮಿಸುತ್ತಿರುವ ಜಾಗತಿಕ ಮಾನವತಾವಾದಿ ನಾಯಕರು. ಶ್ರೀ ಶ್ರೀ ಹುಟ್ಟಿದ್ದು 1956ರಲ್ಲಿ. ಅವರು ಕೇವಲ ನಾಲ್ಕು ವರ್ಷದವರಿದ್ದಾಗಲೇ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಉಪಾಧ್ಯಾಯರನ್ನು ದಂಗುಬಡಿಸಿದ್ದರಂತೆ! ಮಹಾತ್ಮ ಗಾಂಧೀಜಿಯವರ ಒಡನಾಡಿಯಾಗಿದ್ದ ಪಂಡಿತ ಸುಧಾಕರ ಚತುರ್ವೆದಿಯವರಿಂದ ವೇದಾಧ್ಯಯನವನ್ನು ಮಾಡಿ, ವೇದವಿದ್ವಾಂಸರೆನಿಸಿದರು. ಶ್ರೀ ಶ್ರೀ ಅವರು ವಿಜ್ಞಾನ ಪದವೀಧರರೂ ಹೌದು.
ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ಮೂಲಕ ಶಾಂತಿ ಮತ್ತು ನೆಮ್ಮದಿಯ ಸಮಾಜವನ್ನು ನಿರ್ವಿುಸುವುದು ಶ್ರೀ ಶ್ರೀ ಅವರ ಆಶಯ. ಜಗತ್ತಿನ ಉದ್ದಗಲಕ್ಕೂ ಲಕ್ಷಾಂತರ ಜನರಿಗೆ ಈ ದಾರಿಯಲ್ಲಿ ಅವರು ಸ್ಪೂರ್ತಿಯನ್ನು ಒದಗಿಸಿ, ಮಾರ್ಗದರ್ಶಕರಾಗಿದ್ದಾರೆ. ಶಾಂತಿ-ಸಂಧಾನಗಳಿಗಾಗಿ ಮಾತುಕತೆ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ನೆರವು, ಬಡತನ ನಿಮೂಲನೆ, ಸ್ತ್ರೀ ಉದ್ಯೋಗ, ಕೈದಿಗಳ ಪುನರ್ವಸತಿ, ಶಿಕ್ಷಣ, ಸ್ತ್ರೀಭ್ರೂಣ ಹತ್ಯಾವಿರೋಧಿ ಆಂದೋಲನ- ಹೀಗೆ ಹತ್ತಾರು ಪ್ರಕಲ್ಪಗಳ ಮೂಲಕ ಸಾಮಾಜಿಕ ಪರಿವರ್ತನೆಯ ಅಭಿಯಾನದಲ್ಲಿ ಕ್ರಿಯಾಶೀಲರಾಗಿದ್ದಾರೆ. ಒತ್ತಡಮುಕ್ತ ಮತ್ತು ಹಿಂಸಾಮುಕ್ತ ಸಮಾಜದ ನಿರ್ಮಾಣದ ದೂರದೃಷ್ಟಿಯಿಂದ ಶ್ರೀ ಶ್ರೀ ರವಿಶಂಕರ್ ಅವರು 1981ರಲ್ಲಿ ಸ್ಥಾಪಿಸಿದ ‘ಆರ್ಟ್ ಆಫ್ ಲಿವಿಂಗ್’ ಇಂದು ಜಗತ್ತಿನ 182 ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ತನ್ನ ಶಿಕ್ಷಕರು ಮತ್ತು ಸ್ವಯಂಸೇವಕರ ಮೂಲಕ ಜಗತ್ತಿನಾದ್ಯಂತ ಹತ್ತುಕೋಟಿಗೂ ಹೆಚ್ಚು ಜನರನ್ನು ತಲುಪಿದೆ.
ಶೈಕ್ಷಣಿಕ ಮತ್ತು ಮಾನವೀಯಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಈ ಕೇಂದ್ರಕ್ಕೆ ವಿಶ್ವಸಂಸ್ಥೆಯ ವಿಶೇಷ ಮಾನ್ಯತೆ ಲಭಿಸಿದೆ. ಪ್ರಾಚೀನ ಜ್ಞಾನವನ್ನು ಇಂದಿನ ಅವಶ್ಯಕತೆಗೆ ಅನುಗುಣವಾಗಿ ಜನಸಮೂಹಕ್ಕೆ ಒದಗಿಸುತ್ತ ಅಸಂಖ್ಯ ಜನರಲ್ಲಿ ಮಾನಸಿಕ ಸ್ಥೈರ್ಯವನ್ನೂ ಉತ್ಸಾಹವನ್ನೂ ನೆಮ್ಮದಿಯನ್ನೂ ಶ್ರೀ ಶ್ರೀ ಅವರ ಕಾರ್ಯಶೀಲತೆ ಒದಗಿಸಿದೆ. ‘ಸುದರ್ಶನಕ್ರಿಯಾ’ದ ಮೂಲಕ ಅವರು ಸಾಮಾಜಿಕ ಸ್ವಾಸ್ಥ್ಯ್ಕೆ ಅಪೂರ್ವ ಕೊಡುಗೆಯನ್ನು ನೀಡುತ್ತಿದ್ದಾರೆ. ಪ್ರತಿ ವರ್ಷವೂ ಸುಮಾರು 40 ದೇಶಗಳನ್ನು ಸಂದರ್ಶಿಸುವ ಅವರು ಪ್ರೀತಿಯ ಸಂದೇಶವನ್ನು ಸಾರುತ್ತ, ಇಂದು ಮನುಕುಲವನ್ನು ಆವರಿಸಿರುವ ದ್ವೇಷ ಮತ್ತು ಆತಂಕಗಳನ್ನು ಉಪಶಮನಗೊಳಿಸುವಲ್ಲಿ ನಿರತರಾಗಿದ್ದಾರೆ.
ಗುರುದೇವರು ತಮ್ಮ ಅಸಂಖ್ಯಾತ ಶಾಂತಿ ಉಪಕ್ರಮಗಳು, ಸಂಘರ್ಷ ನಿವಾರಣೆ, ವ್ಯಸನಮುಕ್ತಿ, ಜೈಲು ಸುಧಾರಣೆ, ಶಿಕ್ಷಣ, ಯುವ ಸಬಲೀಕರಣ, ಕೌಶಲಸೃಷ್ಟಿ, ನದಿ ಪುನಶ್ಚೇತನ ಮತ್ತು ಪರಿಸರ ಸಂರಕ್ಷಣೆಯಂತಹ ಅನೇಕ ಮಾನವೀಯ ಕಾರ್ಯಕ್ರಮಗಳ ಮೂಲಕ ಹೆಸರಾಗಿದ್ದಾರೆ. ವಿಶ್ವವೇದಿಕೆಯಲ್ಲಿ ಆಯುರ್ವೆದ, ಯೋಗ ಮುಂತಾದ ಭಾರತೀಯ ಪ್ರಾಚೀನ ಜ್ಞಾನ ಪದ್ಧತಿಗಳ ಪ್ರತಿಪಾದಕರಾಗಿದ್ದಾರೆ.
ಬೆಂಗಳೂರಿನಲ್ಲಿ ಕೇವಲ 200 ಮಕ್ಕಳಿಂದ ಪ್ರಾರಂಭವಾದ ಅವರ ಶಿಕ್ಷಣ ಕ್ಷೇತ್ರದ ಪ್ರಯೋಗವು ಇಂದು ದೇಶದಾದ್ಯಂತ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ 1356 ಉಚಿತ ಶಾಲೆಗಳ ಮೂಲಕ 120,000 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುವ ಬೃಹತ್ ಜಾಲವಾಗಿ ಬೆಳೆದಿದೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪ್ರೇರಣೆಯಿಂದ ಹತ್ತು ಕೋಟಿಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. 75ಕ್ಕೂ ಹೆಚ್ಚು ನದಿ, ಉಪನದಿಗಳನ್ನು ಪುನಶ್ಚೇತನಗೊಳಿಸಲಾಗಿದೆ.
ವಸುಧೈವ ಕುಟುಂಬಕಂ ಎನ್ನುವ ಪ್ರಾಚೀನ ಆದರ್ಶವನ್ನು ಬಳಕೆಗೆ ತಂದಿರುವ ಶ್ರೀ ಶ್ರೀ ಸಮುದಾಯಗಳನ್ನು ಬೆಸೆಯುವ ಮತ್ತು ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಪ್ರೇರಕ ಶಕ್ತಿಯಾಗಿದ್ದಾರೆ. ವಿಶ್ವ ಸಂಸ್ಕೃತಿ ಉತ್ಸವಗಳು ವಿಶ್ವಮಟ್ಟದ ಸಂಭ್ರಮಾಚರಣೆಗಳಾಗಿ ಹೊರಹೊಮ್ಮಿದ್ದು ವಾಷಿಂಗ್ಟನ್ ಡಿ. ಸಿ., ನವದೆಹಲಿ, ಬರ್ಲಿನ್ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ನಡೆದ ಉತ್ಸವಗಳಲ್ಲಿ ವಿಶ್ವದಾದ್ಯಂತದ 70 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ನಕ್ಸಲ್ಪೀಡಿತ ಪ್ರದೇಶಗಳು, ಕಾಶ್ಮೀರ, ಕೊಲಂಬಿಯಾ, ಇರಾಕ್, ಶ್ರೀಲಂಕಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸಂಘರ್ಷ ದಲ್ಲಿ ನಿರತರಾಗಿರುವ ಜನರ ನಡುವೆ ಸಂವಾದ ಏರ್ಪಡುವಂತೆ ಮಾಡಿದ್ದಾರೆ.
ವಿಶ್ವಧ್ಯಾನ ದಿನದ ಅಂಗವಾಗಿ 2025ರಲ್ಲಿ ಶ್ರೀ ಶ್ರೀ ನಡೆಸಿಕೊಟ್ಟ ಧ್ಯಾನ ಕಾರ್ಯಕ್ರಮದಲ್ಲಿ 150 ದೇಶಗಳ 1.2 ಕೋಟಿ ಜನರು ಭಾಗವಹಿಸಿದ್ದರು.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ‘ದಿ ಆರ್ಡ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರ’ ಒಂದು ಕಾಲದಲ್ಲಿ ಬಂಡೆಗಳಿಂದ ತುಂಬಿದ್ದ ಬಂಜರು ಭೂಮಿಯಾಗಿತ್ತು. ಇಂದು ನಳನಳಿಸುತ್ತಿರುವ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡಿದೆ. 108 ಅಡಿ ಎತ್ತರದ, 81 ಸ್ತಂಭಗಳ, ಐದು ಮಹಡಿಗಳಲ್ಲಿ 1008 ಕಮಲ ಅಲಂಕಾರಗಳನ್ನು ಹೊಂದಿದ ಪ್ರಸಿದ್ಧ ವಿಶಾಲಾಕ್ಷಿ ಮಂಟಪವು ಇಲ್ಲಿನ ಪ್ರಮುಖ ಆಕರ್ಷಣೆ. ಆತ್ಮೋನ್ನತಿಗಾಗಿ ಧ್ಯಾನ, ಯೋಗ ಮತ್ತು ಸುದರ್ಶನ ಕ್ರಿಯೆಗಳಲ್ಲಿ ನಿರತರಾಗಲು ಜಗತ್ತಿನ ಮೂಲೆ ಮೂಲೆಗಳಿಂದ ವರ್ಷದ ಎಲ್ಲ ದಿನಗಳಲ್ಲಿಯೂ ಸಾವಿರಾರು ಜನರು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ನಡೆಯುವ ಸತ್ಸಂಗವು ಆಶ್ರಮಜೀವನದ ದಿನಚರಿಯ ಪ್ರಮುಖ ಕಾರ್ಯಕ್ರಮ. ಇದು ಜನರು ಒಟ್ಟಿಗೆ ಕಲೆತು ಗಾಯನ, ಧ್ಯಾನ ಮತ್ತು ಜ್ಞಾನಗಳ ಮೂಲಕ ಅಂತರಂಗದ ಪಯಣದಲ್ಲಿ ನಿರತರಾಗುತ್ತಾರೆ.
ಜಗತ್ತಿನಾದ್ಯಂತ ಅನೇಕ ದೇಶಗಳು, ಸಂಸ್ಥೆಗಳು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಗೌರವಿಸಿವೆ. ಕೊಲಂಬಿಯಾ, ಮಂಗೋಲಿಯಾ, ಪರಾಗ್ವೇ ಮತ್ತು ಸುರಿನಾಮ್ ದೇಶಗಳು ತಮ್ಮ ದೇಶಗಳ ಸವೋಚ್ಚ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇದುವರೆಗೆ ಜಗತ್ತಿನ ವಿವಿಧ ವಿಶ್ವವಿದ್ಯಾನಿಲಯಗಳ 26 ಗೌರವ ಡಾಕ್ಟರೇಟುಗಳು ಇವರಿಗೆ ಸಂದಿವೆ. ಅಮೆರಿಕ ಮತ್ತು ಕೆನಡಾ ದೇಶಗಳ 35 ನಗರಗಳು ಶಾಂತಿ, ಶಿಕ್ಷಣ ಮತ್ತು ಮಾನವೀಯ ಸೇವೆ ಕ್ಷೇತ್ರಗಳಲ್ಲಿ ಇವರ ಯೋಗದಾನವನ್ನು ಗುರುತಿಸಿ ‘ಶ್ರೀ ಶ್ರೀ ರವಿಶಂಕರ್’ ದಿನಗಳನ್ನು ಘೊಷಿಸಿವೆ.
ಭಾರತೀಯ ದೇವಾಲಯಗಳ ಸಂಪ್ರದಾಯ ವನ್ನು ಮತ್ತು ವೇದಪಠಣದ ಕ್ರಮವನ್ನು ಉಳಿಸುವ ದಿಸೆಯಲ್ಲಿ ವೇದ ಆಗಮ ಶಾಲೆ ಆಶ್ರಮದ ಪರಿಸರದಲ್ಲಿದೆ. ಗುರುಕುಲದಲ್ಲಿ ತರಬೇತಿ ಪಡೆದ 510ಕ್ಕೂ ಹೆಚ್ಚು ಅರ್ಚಕರು ಈಗ ಅಮೆರಿಕ, ಕೆನಡಾ, ಮಾರಿಷಸ್ ಸೇರಿ ವಿಶ್ವದಾದ್ಯಂತ ಇನ್ನೂ ಅನೇಕ ದೇಶಗಳ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೇದಗಳು ಮತ್ತು ಆಗಮಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಶಿಲ್ಪಶಾಸ್ತ್ರ, ಯೋಗ, ಸಂಗೀತ, ತೇವಾರಂ, ಭಾರತೀಯ ಭಾಷೆಗಳು ಮತ್ತು ಕಂಪ್ಯೂಟರ್ ಶಿಕ್ಷಣದಲ್ಲಿಯೂ ತರಬೇತಿ ನೀಡಲಾಗುತ್ತದೆ. ಇಲ್ಲಿನ ಅನೇಕ ಹಳೆಯ ವಿದ್ಯಾರ್ಥಿಗಳು ಭಾರತೀಯ ಜ್ಞಾನ ಪರಂಪರೆ ವ್ಯವಸ್ಥೆಗಳ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಿ ಪಿ.ಎಚ್ಡಿ ಪದವಿಗಳನ್ನು ಪಡೆದಿದ್ದಾರೆ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪುಟ್ಟಹಳ್ಳಿಯಿಂದ ಆರಂಭವಾದ ಧ್ಯಾನದ ಆಂದೋಲನವು ಪ್ರಸಕ್ತ ಪ್ರಪಂಚದ 182 ದೇಶಗಳಿಗೆ ವ್ಯಾಪಿಸಿ, ಅಲ್ಲಿ ಆಂತರಿಕ ಮತ್ತು ಬಾಹ್ಯ ಪರಿವರ್ತನೆಗೆ ಕಾರಣವಾಗಿರುವುದನ್ನು ಜಗತ್ತೇ ನಿಬ್ಬೆರಗಿನಿಂದ ನೋಡುತ್ತಿದೆ, ಮಾತ್ರವಲ್ಲ ಧ್ಯಾನದ ಮಹಿಮೆಯಿಂದ ಪುಳಕಿತಗೊಂಡಿದೆ. ಈ ಪರಿವರ್ತನೆಯ ಶಕ್ತಿಯೇ ಶ್ರೀ ಶ್ರೀ ರವಿಶಂಕರ್ ಗುರೂಜಿ. ಧ್ಯಾನದ ಮಹತ್ವದ ಕ್ರಮವಾಗಿರುವ ಸುದರ್ಶನ ಕ್ರಿಯೆಯಿಂದ ತಂದಿರುವ ಪರಿವರ್ತನೆಯಂತೂ ( ಕ್ರಮಬದ್ಧ ಉಸಿರಾಟ ದೊಂದಿಗೆ ಧ್ಯಾನ ಮಾಡುವ ಸರಳ ತಂತ್ರವೇ ಸುದರ್ಶನ ಕ್ರಿಯೆ) ಅನನ್ಯ. ಪ್ರಸ್ತುತ 182 ರಾಷ್ಟ್ರಗಳಲ್ಲಿ ಆರ್ಟ್ ಆಫ್ ಲಿವಿಂಗ್ನ 30 ಸಾವಿರ ಶಿಕ್ಷಕರು ಯೋಗ ಮತ್ತು ಪ್ರಾಣಾಯಾಮವನ್ನು ಹೇಳಿಕೊಡುತ್ತಿದ್ದರೆ, 10 ಲಕ್ಷ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಜಾಗತಿಕವಾಗಿ 8 ಲಕ್ಷ ಕೈದಿಗಳಿಗೆ ಧ್ಯಾನ ಹೇಳಿಕೊಟ್ಟು, ಅವರ ಬದುಕಿಗೆ ಹೊಸ ಮಾರ್ಗ ತೋರಿಸಲಾಗಿದೆ.
‘ಧ್ಯಾನಕ್ಕೆ ಪರಿವರ್ತಿಸುವ ಶಕ್ತಿಯಿದೆ’ ಎಂಬ ರವಿಶಂಕರ್ ಗುರೂಜಿಯವರ ವಿಶ್ವಾಸವು, ಬದಲಾವಣೆಯ ಬೆಳಕಾಗಿ ಗೋಚರಿಸುತ್ತಿದೆ. ಜಗತ್ತಿನಾದ್ಯಂತ ಅವರು ಶಾಂತಿ-ಸ್ಥಾಪನೆಯ ಕಾರ್ಯಗಳಲ್ಲಿ ಸಾಧಿಸಿದ ಯಶಸ್ಸು ಅಸಾಧಾರಣ. ಶ್ರೀಲಂಕಾ, ಇರಾಕ್, ವೆನೆಜುವೆಲಾ ಮತ್ತು ಕೊಲಂಬಿಯಾದಂಥ ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಶಾಂತಿ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸಿ, ಶಾಂತಿಸ್ಥಾಪನೆ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಅವರು ಫಾರ್ಕ್ ಬಂಡುಕೋರರು ಮತ್ತು ಕೊಲಂಬಿಯಾ ಸರ್ಕಾರದ ನಡುವಿನ 52 ವರ್ಷಗಳ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ, 500 ವರ್ಷಗಳಷ್ಟು ಹಳೆಯದಾದ ಬಾಬರಿ ಕಟ್ಟಡ-ರಾಮಮಂದಿರ ಸಂಘರ್ಷದ ಮಧ್ಯಸ್ಥಿಕೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಅದೇ ರೀತಿ, ಛತ್ತೀಸ್ಗಢದಲ್ಲಿ ನಕ್ಸಲ್ಪೀಡಿತ ಯುವಕರನ್ನು ಮುಖ್ಯವಾಹಿನಿಗೆ ತರಲು 2025ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ.
ಬೆಂಗಳೂರಿನ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ 70ನೇ ಜನ್ಮದಿನೋತ್ಸವದ ಅಂಗವಾಗಿ ಇಂದು (ಭಾನುವಾರ) ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ನೂತನವಾಗಿ ನಿರ್ವಿುಸಲಾದ ಧ್ಯಾನ ಮಂದಿರವನ್ನು ಉದ್ಘಾಟಿಸಲಿರುವ ಪ್ರಧಾನಿ, ಇದೇ ವೇಳೆ ಆರ್ಟ್ ಆಫ್ ಲಿವಿಂಗ್ನಿಂದ ವರ್ಷಪೂರ್ತಿ ದೇಶವ್ಯಾಪಿ ನಡೆಯುವ, ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಯಂತಹ ಸೇವಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮೇ 10ರಿಂದ 25ರವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಶ್ರೀ ಶ್ರೀ ಗುರುದೇವರ ನೇತೃತ್ವದಲ್ಲಿ ಮೇ 13ರಂದು ಎಲ್ಲರಿಗೂ ಮುಕ್ತವಾಗಿರುವ ‘ವಿಶ್ವ ಶಾಂತಿಗಾಗಿ ಜಾಗತಿಕ ಧ್ಯಾನ’ ನಡೆಯಲಿದೆ.
ನಾಲ್ಕು ಎಕರೆ ಪ್ರದೇಶ ದಲ್ಲಿರುವ ಧ್ಯಾನ ಮಂದಿರವು ಸ್ತಂಭರಹಿತ ವಿಶಾಲ ಜಾಗವನ್ನು ಹೊಂದಿದ್ದು, ಇತರ ಸಾಮಾನ್ಯ ಕಟ್ಟಡ ಗಳಿಗಿಂತ ಭಿನ್ನವಾದ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ 2 ಲಕ್ಷ ಜನರು ಧ್ಯಾನ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಒಳಾಂಗಣ ವಿನ್ಯಾಸದ ಬದಲಾಗಿ, ನೈಸರ್ಗಿಕ ಮತ್ತು ಸಂಸ್ಕರಿಸಿದ ಬಿದಿರನ್ನು ಬಳಸಿರುವುದು ಗಮನಾರ್ಹ.