ಸಿಂದಗಿ ನಗರದ ಕೃಷಿ ಇಲಾಖೆಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಾಮಾನ್ಯ ಸಭೆಯಲ್ಲಿ ತಾಲೂಕು ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ಮಾತನಾಡಿದರು. ಶಿವಪ್ಪಗೌಡ ಬಿರಾದಾರ, ರಮೇಶ ಪೂಜಾರ, ಬಸಯ್ಯ ಹಿರೇಮಠ ಮತ್ತಿತರರಿದ್ದರು.
- ಶಿವಪ್ಪಗೌಡ ಬಿರಾದಾರ ಹೇಳಿಕೆ
- ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ
ಸಿಂದಗಿ: ಸಾವಯವ ಕೃಷಿ ಮತ್ತು ಸಮಗ್ರ ಭೂಮಿ ಮತ್ತು ಬೆಳೆಗಳ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಜಾಗೃತಿ ಕಾರ್ಯ ನಡೆಯಬೇಕು ಎಂದು ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿನ ರೈತರು ಕಬ್ಬಿನ ಬೆಳೆಯತ್ತ ಆಸಕ್ತಿ ಹೊಂದುತ್ತಿದ್ದಾರೆ. ಅವರಿಗೆ ಮಣ್ಣಿನ ಆರೋಗ್ಯ ರಕ್ಷಣೆ, ಸಮತೋಲಿತ ನೀರು, ಬೆಳೆಯ ಪೋಷಕಾಂಶಗಳ ನಿರ್ವಹಣೆಯತ್ತಲೂ ರೈತರ ಗಮನ ಸೆಳೆಯಬೇಕು. ಆ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಕೃಷಿಕ ಸಮಾಜ ಸದಾ ಶ್ರಮಿಸುತ್ತದೆ ಎಂದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕೃಷಿಕ ಸಮಾಜವಿರುವುದೇ ರೈತರ ಕ್ಷೇಮಾಭಿವೃದ್ಧಿಗಾಗಿ. ರೈತ ಸಮಾಜದ ಪೂರಕ ಇಲಾಖೆಗಳ ಅಧಿಕಾರಿಗಳು, ಇಂತಹ ಸಭೆಗಳಲ್ಲಿ ಪಾಲ್ಗೊಂಡು, ರೈತರ ನೋವು, ಸಮಸ್ಯೆ ಆಲಿಸಿ, ಪರಿಹರಿಸುವ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು ಎಂದರು.
ಇಂದಿನ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಮುಂಬರುವ ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಹೆಸ್ಕಾಂ, ಎಪಿಎಂಸಿ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಸೂಚಿಸಬೇಕು. ತಾಲೂಕಿನಲ್ಲಿರುವ ಎಫಿಒ, ಕೃಷಿ ಪರಿಕರ ಮಾರಾಟಗಾರರ ಜತೆಗೆ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಕರೆಯಬೇಕು. ಆಗ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ ಸಾಣಿ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ಪಶುಪಾಲನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶರಣಗೌಡ ಬಿ.ಎಂ., ಅರಣ್ಯಾಧಿಕಾರಿ ಇರ್ಷಾದ ನೇವಾರ ಮಾತನಾಡಿ, ಇಲಾಖೆಗಳ ಪ್ರಗತಿ ತಿಳಿಸುವ ಜತೆಗೆ ರೈತರಿಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಪೂಜಾರ, ತಾಲೂಕು ಉಪಾಧ್ಯಕ್ಷ ಬಸಯ್ಯ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ದೇವೇಂದ್ರ ಬಡಿಗೇರ, ಶಾಯಪ್ಪ ಪೂಜಾರಿ ಇತರರಿದ್ದರು.