ನೈರುತ್ಯ ರೈಲ್ವೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಭಯ್ ಕುಮಾರ ಗುಪ್ತಾ ಅವರನ್ನು ಬೆಂಗಳೂರಿನಲ್ಲಿ ಗುರುವಾರ ರಾಯಚೂರು-ಯಾದಗಿರಿ ಸಂಸದ ಜಿ.ಕುಮಾರ ನಾಯಕ ಭೇಟಿ ಮಾಡಿದರು.
- ಸಂಸದ ಕುಮಾರ ನಾಯಕ ಮಾಹಿತಿ
- ಮುಖ್ಯ ಆಡಳಿತಾಧಿಕಾರಿ ಗುಪ್ತಾ ಅವರಿಗೆ ಭೇಟಿ
ಯಾದಗಿರಿ: ನೂತನವಾಗಿ ಅಧಿಕಾರ ಸ್ವೀಕರಿಸಿದ ನೈರುತ್ಯ ರೈಲ್ವೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಭಯ್ ಕುಮಾರ ಗುಪ್ತಾ ಅವರನ್ನು ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಗುರುವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ರೈಲ್ವೆ ಯೋಜನೆಗಳ ಪ್ರಗತಿ ಹಾಗೂ ಅನುಷ್ಠಾನದ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.
ಪ್ರಸ್ತಾವಿತ ಅಲಮಟ್ಟಿ-ಯಾದಗಿರಿ, ಗದಗ-ವಾಡಿ ಮತ್ತು ರಾಯಚೂರು-ಗಿಣಿಗೇರಾ ರೈಲು ಮಾರ್ಗದ ಅಂತಿಮ ಮಾರ್ಗ ನಿರ್ಧಾರ ಸಮೀಕ್ಷೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ರೈಲ್ವೆ ಮೂಲ ಸೌಕರ್ಯಗಳ ಬಲವರ್ಧನೆ ಹಾಗೂ ಭವಿಷ್ಯದ ಸಂಪರ್ಕ ಜಾಲ ವಿಸ್ತರಣೆಯ ಅಗತ್ಯತೆ ಈ ಯೋಜನೆಗಳು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದ್ದು, ಪ್ರದೇಶದ ಕೈಗಾರಿಕೆ, ಕೃಷಿ, ವ್ಯಾಪಾರ-ವಹಿವಾಟು ಹಾಗೂ ಉದ್ಯೋಗಾವಕಾಶಗಳ ವೃದ್ಧಿಗೆ ಪೂರಕವಾಗಲಿವೆ ಎಂದು ತಿಳಿಸಿದರು.
ಅಲ್ಲದೆ, ಈ ರೈಲು ಮಾರ್ಗಗಳು ಜನರ ಸಂಚಾರವನ್ನು ಸುಗಮಗೊಳಿಸುವುದರ ಜತೆಗೆ ಸರಕು ಸಾಗಣೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಮನವರಿಕೆ ಮಾಡಿದರು.
ವಿಶೇಷವಾಗಿ, ದಶಕಗಳಿಂದ ಈ ಭಾಗದ ಜನರು ನಿರೀಸುತ್ತಿರುವ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು, ಅಗತ್ಯ ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದರು. ರೈಲ್ವೆ ಯೋಜನೆಗಳ ಪ್ರಗತಿಗೆ ಅಗತ್ಯ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಅಭಯ್ಕುಮಾರ ಗುಪ್ತಾ ಕೂಡ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯನ್ನು ವೇಗಗೊಳಿಸಲು ಇಲಾಖೆಯ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅವುಗಳ ಶೀಘ್ರ ಪೂರ್ಣಗೊಳಿಸುವಿಕೆಗಾಗಿ ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.