ಪಾಂಡವಪುರದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಚ್.ಮಂಜುನಾಥ್, ಸಿ.ಅಶೋಕ್, ಮನ್‌ಮುಲ್ ಸದಸ್ಯ ಸಿ.ಶಿವಕುಮಾರ್,ಪುರ ಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಚಂದ್ರು, ಶಿವಕುಮಾರ್, ಜ್ಯೋತಿಲಕ್ಷ್ಮೀ, ಬಿ.ವೈ.ಬಾಬು ಇತರರಿದ್ದರು.
- ಪಟ್ಟಣದ ಎಲ್ಲ ಬಡ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ
- ಪುರಸಭೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ
ಪಾಂಡವಪುರ : ಪಟ್ಟಣದ ಎಲ್ಲ ಬಡ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಹಾಗೂ ಪುರಸಭೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಣೆಗೊಂಡ ಜೆಡಿಎಸ್ ಕಾರ್ಯಕರ್ತರು ಹಾಗೂ ಟೌನ್ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಮೆರವಣಿಗೆ ಮೂಲಕ ತಮಟೆ ಸದ್ದಿನೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪಟ್ಟಣದಲ್ಲಿ ವಾಸವಿರುವ ಎಲ್ಲ ಜನಾಂಗದ ಕಡುಬಡವರಿಗೆ ಏಕಕಾಲಕ್ಕೆ ನಿವೇಶನ ಹಂಚಿಕೆ ಮಾಡಬೇಕು ಹಾಗೂ ಪುರಸಭೆ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಬಡವರಿಗೆ ನಿವೇಶನ ಹಂಚಿಕೆ ಮಾಡಬೇಡಿ ಅಂತ ಹೇಳುವುದಿಲ್ಲ. ಕೇವಲ 176 ನಿವೇಶನ ಹಂಚಿಕೆ ಮಾಡಿದರೆ ಉಳಿದವರು ಎಲ್ಲಿಗೆ ಹೋಗಬೇಕು. ನಾನು ಶಾಸಕನಾಗಿದ್ದ ಅವಧಿಯಲ್ಲಿ ನಿವೇಶನ ಹಂಚಿಕೆಗಾಗಿ ಪಟ್ಟಣ ವ್ಯಾಪ್ತಿಯಲ್ಲಿ 25 ಎಕರೆ ಗುರುತಿಸಿದ್ದೆ. ನಮ್ಮ ಆಡಳಿತ ಮಂಡಳಿ ಹೋದ ನಂತರ ನಿವೇಶನ ಹಂಚಿಕೆಗೆ ಮಾಡಲಾಗುತ್ತಿದೆ. ಹಾರೋಹಳ್ಳಿ ಬಳಿ ಈಗಿರುವ ನಿವೇಶನಗಳನ್ನು ಅಲ್ಲಿಯ ಬಡವರಿಗೆ ಮೀಸಲಿರಿಸಬೇಕು. ಪಟ್ಟಣದಲ್ಲಿ ಜಾಗ ಗುರುತಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಆದರೆ ಮುಖ್ಯಾಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿಗೆ ಈಗಾಗಲೇ ನಿವೇಶನಗಳನ್ನು ನಿಗದಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು, ಸಾಕ್ಷಿ ಸಮೇತ ಇಲ್ಲಿಗೆ ಬಂದಿದ್ದೇವೆ. ದೊಡ್ಡ ಮಟ್ಟದ ತನಿಖೆಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕೋಟಿಗಟ್ಟಲೇ ಭ್ರಷ್ಟಾಚಾರ: ಪುರಸಭೆ ಮುಖ್ಯಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಬಂದಂತೆ ಕಾರಿನಲ್ಲೇ ಬರುತ್ತಾರೆ. ಪುರಸಭೆಗೆ ಸೇರಿದ ವಾಹನಗಳ ಇಂಧನವನ್ನೇ ಅವರ ಕಾರಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ಈ ಹಿಂದೆ ಕೆಲಸ ಮಾಡಿದ ಕಡೆಗಳಲ್ಲಿ ಭ್ರಷ್ಟಾಚಾರ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಜಿಲ್ಲಾಧಿಕಾರಿ ಸಮಿತಿ ರಚಿಸಿ ಮುಖ್ಯಾಧಿಕಾರಿಗಳನ್ನು ರಜೆ ಮೇಲೆ ಮನೆಗೆ ಕಳುಹಿಸಿ ಮುಕ್ತವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಸಿ.ಅಶೋಕ್, ಮನ್‌ಮುಲ್ ಸದಸ್ಯ ಸಿ.ಶಿವಕುಮಾರ್,ಪುರ ಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಚಂದ್ರು, ಶಿವಕುಮಾರ್, ಜ್ಯೋತಿಲಕ್ಷ್ಮೀ, ಬಿ.ವೈ.ಬಾಬು, ಸುನೀತಾ ಕದಿರೇಶನ್, ಅರ್ಚನಾ ಚಂದ್ರು, ಮುಖಂಡರಾದ ಎಚ್.ಸಿ.ಕೃಷ್ಣೇಗೌಡ (ಪಟೇಲ್), ಪವನ್, ಸತೀಶ್, ಸಿಂಡಭೋಗನಹಳ್ಳಿ ನಾಗಣ್ಣ ಹಲವರು ಭಾಗವಹಿಸಿದ್ದರು.