Allocate land to the poor.
ಗುಡಿಬಂಡೆ: ತಾಲೂಕಿನ ತಿರುಮಣಿ ಗ್ರಾಮದ ಸರ್ವೇ ನಂ.36 ರಲ್ಲಿ ಪ್ರಾರಂಭವಾಗುತ್ತಿರುವ ಜಲ್ಲಿ ಕ್ರಷರ್ಗೆ ಅನುಮತಿ ನೀಡಬಾರದೆಂದು ತಿರುಮಣಿ, ಚಿನ್ನಪ್ಪನಹಳ್ಳಿ, ಯರ್ರಲಕ್ಕೇನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಸಿಗ್ಬತ್ವುಲ್ಲಾಗೆ ಮನವಿ ಸಲ್ಲಿಸಿದರು.
ಯರ್ರಲಕ್ಕೇನಹಳ್ಳಿ ಮಂಜುನಾಥ ಮಾತನಾಡಿ, ತಾಲೂಕಿನ ತಿರುಮಣಿ ಗ್ರಾಮದ ಸರ್ವೇ ನಂ.36 ರಲ್ಲಿ 3 ಗ್ರಾಮಗಳ ಗ್ರಾಮಸ್ಥರು ಪೂರ್ವಜರ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ನಮೂನೆ- 550, 55, 57ರಲ್ಲಿ ಭೂಮಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಫೆ-.2 ರಂದು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಜಲ್ಲಿ ಕ್ರಷರ್ಗೆ ಜಮೀನು ಮಂಜೂರು ಮಾಡಲು ಸರ್ವೇ ಮಾಡಿದ್ದಾರೆ. ಆದ್ದರಿಂದ ಅಧಿಕಾರಿಗಳ ಸರ್ವೇ ನಿಲ್ಲಿಸಿ ಬಡವರಿಗೆ ಭೂಮಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ತಿರುಮಣಿಯ ವೆಂಕಟೇಶಪ್ಪ ಮಾತನಾಡಿ, ಗ್ರಾಮದ ಸರ್ವೇ ನಂ.36ರಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪಂಗಡದವರು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜತೆಗೆ ಗೋಮಾಳ ಜಮೀನಿದೆ. ಮೂರು ಗ್ರಾಮಗಳ ಗ್ರಾಮಸ್ಥರ ಹಸುಗಳನ್ನು ಮೇಯಿಸಲು ಅದೊಂದೆ ಜಾಗವಿದ್ದು, ಅಲ್ಲಿ ಜಲ್ಲಿ ಕ್ರಷರ್ಗೆ ಅನುಮತಿ ನೀಡಿದರೆ ಕೆಲ ಬಡವರು ಭೂಮಿ ಇಲ್ಲದೇ ಬೀದಿಗೆ ಬೀಳುತ್ತಾರೆ. ಜಾನುವಾರಗಳಿಗೂ ಕುಡಿಯುವ ನೀರಿಗಾಗಿ ಕುಂಟೆಯೂ ಇದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಬಡ ಕೂಲಿ, ಕಾರ್ಮಿಕರಿಗೆ ತೊಂದರೆ ಮಾಡದೇ ಜಲ್ಲಿ ಕ್ರಷರ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕಾರ ಮಾಡಬೇಕೆಂದು ಎಂದರು.