Karnataka SIR | ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಎನ್‌ಡಿಎ ನಾಯಕರು 
ರಾಜ್ಯ

ಎಸ್‌ಐಆರ್ ಅಕ್ರಮ ಆರೋಪ; ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಎನ್‌ಡಿಎ ನಾಯಕರು | Karnataka SIR

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ (Karnataka SIR) ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವ್ಯಾಪಕ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಎನ್‌ಡಿಎ (NDA) ನಿಯೋಗವು ನವದೆಹಲಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಅಧಿಕೃತ ದೂರು ದಾಖಲಿಸಿದೆ.
ಕೇಂದ್ರ ಚುನಾವಣಾ ಆಯೋಗದೊಂದಿಗಿನ ಮಹತ್ವದ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‌ಡಿಎ ನಾಯಕರು, ಕರ್ನಾಟಕ ಸರ್ಕಾರವು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಎಸ್‌ಐಆರ್ ನಿಯಮಗಳ ಬುಡಮೇಲು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾವು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದೇವೆ. ರಾಜ್ಯ ಸರ್ಕಾರವು ವ್ಯವಸ್ಥಿತವಾಗಿ ದೊಡ್ಡದೊಂದು ಷಡ್ಯಂತ್ರ ರೂಪಿಸುತ್ತಿದ್ದು, ಇಡೀ ಎಸ್‌ಐಆರ್​ ಪ್ರಕ್ರಿಯೆಯನ್ನೇ ಬುಡಮೇಲು ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಕಡ್ಡಾಯವಾಗಿ ಮನೆ ಮನೆಗಳಿಗೆ ಭೇಟಿ ನೀಡಿ ಫಾರಂಗಳನ್ನು ಹಂಚಬೇಕು. ಕನಿಷ್ಠ ಮೂರು ಬಾರಿಯಾದರೂ ಮನೆಗೆ ಹೋಗಿ ಪರಿಶೀಲನೆ ನಡೆಸಬೇಕು ಮತ್ತು ಮನೆಯವರೇ ಖುದ್ದಾಗಿ ಆ ಫಾರಂ ಅನ್ನು ಭರ್ತಿ ಮಾಡಿ ಕೊಡಬೇಕು. ಆದರೆ ರಾಜ್ಯದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಜೋಶಿ ದೂರಿದರು.
ಮನೆ ಮನೆಗೆ ಹೋಗಬೇಕಾದ ಅಧಿಕಾರಿಗಳು ಇಂದು ಮದರಸಾ, ಮಸೀದಿ, ದರ್ಗಾ ಹಾಗೂ ಕಾಂಗ್ರೆಸ್ ನಾಯಕರ ನಿವಾಸಗಳಲ್ಲಿ ಕುಳಿತುಕೊಂಡು ಫಾರಂಗಳನ್ನು ತುಂಬುತ್ತಿದ್ದಾರೆ. ಇದೊಂದು ರೀತಿಯಲ್ಲಿ ಸಾಮೂಹಿಕ ನಕಲು ಮಾಡಿದಂತೆ ನಡೆಯುತ್ತಿದೆ. ಈ ಬಗ್ಗೆ ಬೂತ್ ಮಟ್ಟದ ಏಜೆಂಟ್‌ಗಳಿಗೆ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ. ಇಷ್ಟೇ ಅಲ್ಲದೆ, ಅಧಿಕಾರಿಗಳು ಅತ್ಯಂತ ಉದ್ಧಟನದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದ್ದಾರೆ.
ಯಾವುದೇ ಮತಗಳು ಡಿಲೀಟ್ ಆಗದಂತೆ ನೋಡಿಕೊಳ್ಳಲು ಸರ್ಕಾರವೇ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಗಂಭೀರ ಲೋಪದೋಷಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಆಯೋಗದ ವತಿಯಿಂದಲೇ ವಿಶೇಷ ವೀಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಆಯೋಗ ನೀಡಿದೆ ಎಂದು ಅವರು ತಿಳಿಸಿದರು.

ಜನರಲ್ಲಿ ಗ್ಯಾರಂಟಿ ಭಯ: ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಇದೇ ವಿಷಯವಾಗಿ ಮಾತನಾಡಿದ ಮತ್ತೋರ್ವ ಕೇಂದ್ರ ಸಚಿವ ಎಚ್​​ ಡಿ ಕುಮಾರಸ್ವಾಮಿ ಅವರು, ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಒಳಗೊಂಡ ನಿಯೋಗವು ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಜಂಟಿ ಮನವಿ ಪತ್ರವನ್ನು ಸಲ್ಲಿಕೆ ಮಾಡಿದ್ದೇವೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು, ಇಂದು ಕೇಂದ್ರ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ನಮ್ಮ ದೂರನ್ನು ಆಲಿಸಿರುವ ಆಯೋಗವು ಇದನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದೆ ಎಂದರು.
ರಾಜ್ಯ ಸರ್ಕಾರವು ಇಡೀ ಆಡಳಿತ ಯಂತ್ರ ಹಾಗೂ ಅಧಿಕಾರಿಗಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹೊಸದಾಗಿ ನಕಲಿ ಮತಗಳನ್ನು ಸೃಷ್ಟಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದೆಡೆ, ಜನರಲ್ಲಿ ಅನಗತ್ಯವಾಗಿ ಗಾಬರಿ ಹುಟ್ಟಿಸಲಾಗುತ್ತಿದೆ. ಒಂದು ವೇಳೆ ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸದಿದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಡಿತಗೊಳ್ಳುತ್ತವೆ ಎಂಬ ಸುಳ್ಳು ಭಯವನ್ನು ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು.
ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ಕಾನೂನುಬದ್ಧವಾಗಿ ಮತ್ತು ನ್ಯಾಯಯುತವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಯಬೇಕು ಎಂದು ಎನ್‌ಡಿಎ ನಿಯೋಗವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಕಾಂಗ್ರೆಸ್​ನ ಎಸ್‌ಐಆರ್ ನಡೆಯುತ್ತಿದೆ: ಆರ್. ಅಶೋಕ್ ಆರೋಪ

ಇದೇ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಆರ್. ಅಶೋಕ್, ಪ್ರತಿಯೊಬ್ಬ ಅರ್ಹ ಪ್ರಜೆಯೂ ತನ್ನ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಸಂವಿಧಾನಬದ್ಧವಾಗಿ ಎಸ್‌ಐಆರ್ ಮಾಡಬೇಕು. ಆದರೆ, ರಾಜ್ಯದಲ್ಲಿ ಸಂವಿಧಾನದ ಎಸ್‌ಐಆರ್ ಬದಲಿಗೆ ಸಂಪೂರ್ಣವಾಗಿ ಕಾಂಗ್ರೆಸ್​ನ ಎಸ್‌ಐಆರ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರ ಮತಗಳು ಡಿಲೀಟ್ ಆದರೂ ಪರವಾಗಿಲ್ಲ, ಆದರೆ ಮುಸ್ಲಿಂ ಮತಗಳು ಮಾತ್ರ ಯಾವುದೇ ಕಾರಣಕ್ಕೂ ಡಿಲಿಟ್ ಆಗಬಾರದು. ಕರೀಂ, ಖಾನ್ ಮುಂತಾದ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗಬಾರದು ಎಂದು ಡಿಸಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ರೀತಿಯ ಕಾನೂನುಬಾಹಿರ ನಿರ್ದೇಶನವನ್ನು ನೀಡಿರುವುದು ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂದು ನೇರವಾಗಿ ಆರೋಪಿಸಿದರು.

ಸಿಎಂ ಡಿ ಕೆ ಶಿವಕುಮಾರ್ ಕಾರ್ಯವೈಖರಿಗೆ ಟೀಕೆ

ನಿಯಮಗಳ ಪ್ರಕಾರ ಸತ್ತವರು, ಬೇರೆಡೆಗೆ ವರ್ಗಾವಣೆಯಾದವರು, ವಿದೇಶದಲ್ಲಿ ನೆಲೆಸಿರುವವರು ಹಾಗೂ ಕಾನೂನುಬಾಹಿರ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕು. ಆದರೆ, ಈ ಎಲ್ಲ ನಿಬಂಧನೆಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಎಸ್‌ಐಆರ್ ಮಾಡಲಾಗುತ್ತಿದೆ ಎಂದ ಆರ್​ ಅಶೋಕ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುತ್ತಾ ಬಂದಿದ್ದರೂ, ಅವರು ಮುಖ್ಯಮಂತ್ರಿ ತರಹ ನಡೆದುಕೊಳ್ಳುತ್ತಿದ್ದಾರೆ ಎಂದು ನಮಗೆ ಅನಿಸುತ್ತಿಲ್ಲ. ಅದೇ ಹಳೆಯ ಬಾಡಿ ಲಾಂಗ್ವೇಜ್ ಇಟ್ಟುಕೊಂಡು ಅಧಿಕಾರಿಗಳಿಗೆ ಬೆದರಿಸುವ ಧಾಟಿಯಲ್ಲಿ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.
ನಮ್ಮ ದೇಶದಲ್ಲಿ ಕೇವಲ ಭಾರತೀಯರಿಗೆ ಮಾತ್ರ ಮತದಾನದ ಅವಕಾಶ ಸಿಗಬೇಕು. ಅದನ್ನು ಬಿಟ್ಟು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳಿಗೆ ಯಾವುದೇ ಕಾರಣಕ್ಕೂ ಇಲ್ಲಿ ಮತದಾನದ ಹಕ್ಕು ನೀಡಬಾರದು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.