ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ಕುರುಬ ಸಂಘ-ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡಲಾಗಿತ್ತು ಎಂಬ ಆರೋಪಕ್ಕೆ ಶನಿವಾರ(ಜೂ. 13) ಪ್ರತಿಕ್ರಿಯಿಸಿರುವ ಮಾಜಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ, ಅಂತಹ ಆರೋಪ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸುಮಾರು 89 ಕುರುಬ ಸಮುದಾಯದ ಸಂಘ-ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡಲಾಗಿತ್ತು, ಉಳಿದ ಸಮುದಾಯಳಿಗೆ ಅನುದಾನ ನೀಡಿರಲಿಲ್ಲ ಎಂದು ಇತ್ತೀಚೆಗೆ ಈಡಿಗ ಸಮುದಾಯ ಸ್ವಾಮೀಜಿಯೊಬ್ಬರು ಆರೋಪಿಸಿದ್ದರು.
ಈ ಕುರಿತು ಮಾತನಾಡಿರುವ ಶಿವರಾಜ್ ತಂಗಡಗಿ, ವಿರೋಧ ಪಕ್ಷಗಳಿಗೆ ಮಾಡಲು ಕೆಲಸವಿಲ್ಲ, ಸುಮ್ಮನೇ ಆರೋಪ ಮಾಡುತ್ತಿವೆ. ನಾನು 28ನೇ ತಾರೀಖಿನಿಂದಲೇ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಹಿಂದಿನ ಸಿಎಂ ಸಿದ್ದರಾಮಯ್ಯ ಬಿಟ್ಟ ತಕ್ಷಣ ನಾನೂ ಇಲಾಖೆ ಬಿಟ್ಟಿದ್ದೇನೆ ಎಂದಿದ್ದಾರೆ.
ನನ್ನ ಅವಧಿಯಲ್ಲಿ ಬೇರೆ ಸಮುದಾಯದ ಸಂಘ ಸಂಸ್ಥೆಗಳಿಗೂ ಸಾಕಷ್ಟು ಅನುದಾನ ನೀಡಿದ್ದೇನೆ. ಒಂದೇ ಸಮುದಾಯಕ್ಕೆ ಹಣ ನೀಡಲಾಗಿದೆ ಎಂಬುದು ಸುಳ್ಳು. ನಾನು ಅಧಿಕಾರದಲ್ಲಿ ಇದ್ದಾಗ ಅದು ಆದೇಶವಾಗಿಲ್ಲ. ಬಿಜೆಪಿಯವರು ಅವರ ಕಾಲದಲ್ಲಂತೂ ಕೆಲಸ ಮಾಡಿಲ್ಲ. ಈಗ ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.